ರಾಮಾಯಣ ಶಿಕ್ಷಣ ವ್ಯವಸ್ಥೆಯಲ್ಲಿ ಅಡಕವಾಗಲಿ

07HDK4
Published on

ಎಚ್.ಡಿ.ಕೋಟೆ: ರಾಮಾಯಣ ಬರೆದ ವಾಲ್ಮೀಕಿಯವರನ್ನು ಡಕಾಯಿತ, ಕ್ರೂರಿ ಎಂದು ಕೆಲವರು ಹೇಳುತ್ತಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯವು ಇದು ಧರ್ಮದ ವಿರುದ್ಧವಾದ ಹೇಳಿಕೆ ಎಂದಿದೆ. ಮುಂದೆ ಧರ್ಮ ವಿರೋಧಿ ಹೇಳಿಕೆ ನೀಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ತೀರ್ಪು ನೀಡಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕಾನೂನು ವಿಭಾಗದ ಪ್ರಾಧ್ಯಾಪಕ ಪ್ರೊ.ಟಿ.ಆರ್.ಮಾರುತಿ ತಿಳಿಸಿದರು.

ಪಟ್ಟಣದ ಡಾ.ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ಮಂಗಳವಾರ ಎಚ್.ಡಿ. ಕೋಟೆ ಮತ್ತು ಸರಗೂರು ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಪುರಸಭೆ ಹಾಗೂ ವಾಲ್ಮೀಕಿ ಸಮುದಾಯದ ವತಿಯಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೆಳ ಜಾತಿಯವರು ಬರೆದದ್ದನ್ನು ಮೇಲ್ಜಾತಿಯವರು ಕೀಳಾಗಿ ಭಾವಿಸುವುದುಂಟು. ರಾಮಾಯಣವನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಕಡ್ಡಾಯವಾಗಿ ಅಳವಡಿಸಬೇಕು ಎಂದು ಒತ್ತಾಯಿಸಿದರು.

ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ವಾಲ್ಮೀಕಿಯವರು ರಾಮಾಯಣವನ್ನು ದಾಖಲಿಸದಿದ್ದರೇ ಪ್ರಪಂಚದ ಉತ್ತಮ ಸಹೋದರತ್ವ ರಾಮ ಲಕ್ಷ್ಮಣ ಅವರ ಸಹೋದರತ್ವ ಮತ್ತು ದಶರಥ ಮತ್ತು ಶ್ರೀರಾಮರ ತಂದೆ ಮಗನ ಭಾಂದವ್ಯ ಮರೆಯಾಗಿ ಹೋಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.

ಶಿವನಿಗೆ ಕಣ್ಣನ್ನು ದಾನ ಮಾಡಿದ ಮತ್ತು ದ್ರೋಣಾಚಾರ್ಯರಿಗೆ ಹೆಬ್ಬೆರಳನ್ನು ಕೊಟ್ಟ ಸಮುದಾಯ ನಮ್ಮದಾಗಿದ್ದು ಇಂತಹ ಸಮುದಾಯವು ಮೀಸಲಾತಿಗೆ ಹೋರಾಡಬೇಕಾದ ಅನಿವಾರ್ಯತೆ ಬಂದೊದಗಿದ್ದು ಬೇಸರದ ಸಂಗತಿಯಾಗಿತ್ತು ಎಂದರು.

ಪಟ್ಟಣದಲ್ಲಿ ವಾಲ್ಮೀಕಿ ಭವನಕ್ಕೆ ಇದುವರೆಗೂ 4.70 ಕೋಟಿ ರೂ. ಖರ್ಚಾಗಿದ್ದು, ಇನ್ನು ಎರಡು ಕೋಟಿ ರೂ. ಬೇಕಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಂಜೂರು ಮಾಡುವ ಭರವಸೆ ನೀಡಿದ್ದು, ಮುಂದಿನ ವಾಲ್ಮೀಕಿ ಜಯಂತಿ ವೇಳೆಗೆ ಭವನ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು.

ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಮಾತನಾಡಿ, ಜಿನ್ನಹಳ್ಳಿ ರಾಜನಾಯಕ, ಕ್ಯಾತನಹಳ್ಳಿ ನಾಗರಾಜು, ಚಾಕಳ್ಳಿ ಕೃಷ್ಣ, ಜಿಯಾರ ನಾಗನಾಯಕ ಅವರ ಶ್ರಮದಿಂದ ನಾನು ಮತ್ತು ಶಾಸಕ ಅನಿಲ್ ಕುಮರ್ ಅವರು ಸಮಾಜದ ಹಿತದೃಷ್ಟಿಯಿಂದ ಒಂದಾಗಿದ್ದೇವೆ. ಇದಕ್ಕೆ ರಾಜಕೀಯ ಬಣ್ಣ ಬೆರೆಸುವ ಅಗತ್ಯವಿಲ್ಲ ಎಂದರು.

ನಾಯಕ ಸಮಾಜದ ತಾಲೂಕು ಅಧ್ಯಕ್ಷರಾದ ಎಂ.ಸಿ.ದೊಡ್ಡ ನಾಯಕ, ಬಸವರಾಜು, ಮಾಜಿ ಅಧ್ಯಕ್ಷ ಶಂಭುಲಿಂಗನಾಯಕ, ಮುಖಂಡರಾದ ಜಯಪ್ರಕಾಶ್ ಚಿಕ್ಕಣ್ಣ, ಚಿಕ್ಕವೀರನಾಯಕ, ಪುರಸಭೆ ಅಧ್ಯಕ್ಷೆ ಶಿವಮ್ಮ, ಜಿನ್ನಹಳ್ಳಿ ರಾಜನಾಯಕ, ಕ್ಯಾತನಹಳ್ಳಿ ನಾಗರಾಜು, ಚಾಕಳ್ಳಿ ಕೃಷ್ಣ, ಜಿಯಾರ ನಾಗನಾಯಕ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net