ಆಡುವ ಭಾಷೆ ಕನ್ನಡವೇ ಆಗಿರಲಿ

sammelana
ಭದ್ರಾವತಿ ನ್ಯೂಟೌನ್ ಎಸ್‌ಎವಿ ಶಾಲಾ ಸಭಾಂಗಣದಲ್ಲಿ ನಡೆದ 11ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನ್ಯೂಟೌನ್ ಆದಿಚುಂಚನಗಿರಿ ಪ್ರೌಢಶಾಲೆ ವಿದ್ಯಾರ್ಥಿ ಮನಿಷ್ ಪಿ. ಯಾದವ್ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷೆ ಜಿ.ಲಿಖಿತಾ, ಡಿ.ಮಂಜುನಾಥ್, ಕೋಡ್ಲುಯಜ್ಞಯ್ಯ, ಎಂಎಸ್.ಸುಧಾಮಣಿ, ಕೋಗಲೂರು ತಿಪ್ಪೇಸ್ವಾಮಿ ಇತರರಿದ್ದರು.
Published on

ಭದ್ರಾವತಿ: ನಾವು ಜ್ಞಾನಕ್ಕಾಗಿ, ತಿಳಿವಳಿಕೆಗಾಗಿ, ವ್ಯವಹಾರಕ್ಕೆ ಯಾವುದೇ ಭಾಷೆಯನ್ನು ಕಲಿತರೂ ನಮ್ಮ ಆಡುಭಾಷೆ ಕನ್ನಡವಾಗಿರಬೇಕು. ಮಾತೃಭಾಷೆಗೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದು ಮಕ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ, ಪೂರ್ಣಪ್ರಜ್ಞಾ ಶಾಲೆಯ ವಿದ್ಯಾರ್ಥಿನಿ ಜಿ.ಲಿಖಿತಾ ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಘಟಕ, ಎಸ್‌ಎವಿ ಶಾಲೆಗಳು ಮತ್ತು ಕಾಲೇಜು, ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ನ್ಯೂಟೌನ್ ಆದಿಚುಂಚನಗಿರಿ ಶಾಲಾ ಆವರಣದಲ್ಲಿ ಆಯೋಜಿಸಿದ್ದ 11ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯು ಸಾಂಸ್ಕೃತಿಕ, ಸಾಹಿತ್ಯಿಕವಾಗಿಯೂ ಮಂಚೂಣಿಯಲ್ಲಿದೆ. ಜ್ಞಾನಪೀಠ ಪ್ರಶಸ್ತಿ ಪಡೆದ ಕುವೆಂಪು ಹಾಗೂ ರಾಷ್ಟ್ರಕವಿಗಳಾದ ಜಿ.ಎಸ್.ಶಿವರುದ್ರಪ್ಪ ನಮ್ಮ ಜಿಲ್ಲೆಯವರೇ ಎಂಬುದು ನಮ್ಮ ಹೆಮ್ಮೆ. 8 ಜ್ಞಾನಪೀಠ ಪ್ರಶಸ್ತಿಗಳನ್ನು ತಂದುಕೊಟ್ಟ ಈ ಸುಂದರವಾದ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಹೊಣೆ ಎಂದರು.

ಹೆಸರಾಂತ ಕವಿಗಳು, ಸಾಹಿತಿಗಳು, ನಾಟಕಕಾರರು, ಕಲಾವಿದರು ನಮ್ಮ ಜಿಲ್ಲೆಗೆ ಕೀರ್ತಿ ತಂದುಕೊಟ್ಟಿದ್ದಾರೆ. ನಮ್ಮ ನಾಡಿನ ಸಾಹಿತ್ಯಿಕ ಚಿತ್ರಣವನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಇಂತಹ ಸಮ್ಮೇಳನಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದರು.

ಇತ್ತೀಚೆಗೆ ವಿದ್ಯಾರ್ಥಿಗಳ ಮನಸ್ಸು ಗೊಂದಲಮಯವಾಗಿದೆ. ಬಹಳಷ್ಟು ಮಕ್ಕಳು ಡಿಪ್ರೆಷನ್‌ಗೆ ಒಳಗಾಗುತ್ತಿದ್ದಾರೆ. ಸಣ್ಣಪುಟ್ಟ ವಿಷಯಕ್ಕೆ ಕೋಪಿಸಿಕೊಳ್ಳುವುದು. ಏಕಾಂಗಿಯಾಗಿರಲು ಇಷ್ಟಪಡುತ್ತಾರೆ. ಇದಕ್ಕೆ ಕಾರಣ ನಾವು ನಮ್ಮ ಮನೆಯವರೊಂದಿಗೆ ಬೆರೆಯದೆ ಟಿವಿ, ಮೊಬೈಲ್ ನೋಡುವುದೇ ಕಾರಣ. ಇದರಿಂದ ಹೊರಬಂದು ಪುಸ್ತಕಗಳನ್ನು ಓದುವ, ಸಾತ್ವಿಕ ಆಹಾರ ಸೇವಿಸುವ ಹಾಗೂ ಕುಟುಂಬದವರೊಂದಿಗೆ ಬೆರೆಯುವ ಪರಿಪಾಠ ಬೆಳಸಿಕೊಳ್ಳಬೇಕು. ಆಗ ಮನಸ್ಸು ಮತ್ತು ಚಿಂತನೆಗಳು ಶುದ್ಧವಾಗಿರುತ್ತವೆ ಎಂದು ತಿಳಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ಸಾಹಿತ್ಯ ಎಲ್ಲರಿಗೂ ಒಲಿಯುವುದಿಲ್ಲ. ಸಾಹಿತ್ಯದ ಓದು ಹಾಗೂ ಅರಿವಿನ ಪ್ರಜ್ಞೆ ಇದ್ದವರಿಗೆ ಮಾತ್ರ ಒಲಿಯುತ್ತದೆ. ಸಾಹಿತ್ಯವನ್ನು ಬಿತ್ತುವ ಕೆಲಸವನ್ನು ಕಸಾಪ ಕಾವ್ಯ, ಕಮ್ಮಟ, ಸಮ್ಮೇಳನಗಳು ಸೇರಿದಂತೆ ಇನ್ನಿತರ ಕಾರ್ಯಕ್ರಮಗಳ ಮೂಲಕ ಮಾಡುತ್ತಿದೆ. ಪ್ರತಿಭೆ ಯಾರ ಸ್ವತ್ತೂ ಅಲ್ಲ. ಪ್ರತಿಭೆಯನ್ನು ಹೊರತೆಗೆಯುವ ಕೆಲಸ ನಾವೆಲ್ಲರೂ ಒಟ್ಟಾಗಿ ಮಾಡಬೇಕು. ಯುನೆಸ್ಕೋ ವರದಿಯಂತೆ ದೇಶದಲ್ಲಿ 8 ಸಾವಿರ ಭಾಷೆಗಳಿದ್ದು ಎಲ್ಲವೂ ಉಳಿಯಬೇಕು. ಯಾವುದೂ ಸಾಯಬಾರದು ಎಂದರು.

ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷೆ ಎಂ.ಎಸ್.ಸುಧಾಮಣಿ, ಕಸಾಪ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಉದ್ಯಮಿ ಬಿ.ಕೆ.ಜಗನ್ನಾಥ್, ಶಾಲಾ ಮುಖ್ಯಶಿಕ್ಷಕಿ ಕೋಮಲಾ, ಕೋಗಲೂರು ತಿಪ್ಪೇಸ್ವಾಮಿ, ಎಂ.ಆರ್.ರೇವಣಪ್ಪ, ಶಿಕ್ಷಕಿ ಗೀತಾ, ವಿದ್ಯಾರ್ಥಿನಿಯರಾದ ಸಿ.ಯೋಷಿತಾ, ಸಿ.ಮಾನ್ಯಾ, ಚಿಂತನಾ ಎಸ್. ಗೌಡ ಸೇರಿದಂತೆ ಹಲವರಿದ್ದರು. ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಕವಿಗೋಷ್ಠಿ, ಕಥಾಗೋಷ್ಠಿ ಹಾಗೂ ಪ್ರಚಲಿತ ವಿದ್ಯಮಾನಗಳ ಕುರಿತು ಗೋಷ್ಠಿಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net