ಬಸವಣ್ಣನನ್ನು ಅರಿತುಕೊಳ್ಳುವ ದೃಷ್ಟಿಕೋನ ಬದಲಾಗಲಿ

basava
ಶಿವಮೊಗ್ಗದ ಬಸವಕೇಂದ್ರದಲ್ಲಿ ಆಯೋಜಿಸಿದ್ದ ಚಿಂತನ ಕಾರ್ತಿಕ ಉಪನ್ಯಾಸ ಮಾಲಿಕೆಗೆ ಬೆಂಗಳೂರು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಚಾಲನೆ ನೀಡಿದರು. ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ, ಜಿ.ಬೆನಕಪ್ಪ, ಜಯಾಶೇಖರ್, ಟಿ.ಇ.ಚಂದ್ರಕಲಾ ಇದ್ದರು.
Published on

ಶಿವಮೊಗ್ಗ: ಬಸವಪ್ರಜ್ಞೆ ಬಗ್ಗೆ ನಮ್ಮಲ್ಲಿ ಜಾಗೃತಿ ಹೆಚ್ಚಬೇಕು. 850 ವರ್ಷ ಕಳೆದರೂ ನಾವು ಬಸವಣ್ಣನವರ ಬಗ್ಗೆ ಹೆಚ್ಚು ಅರಿವು ಹೊಂದಿಲ್ಲ. ಆ ಹೆಸರಿನ ಪ್ರಜ್ಞೆ ಇದೆ. ಆದರೆ ಬಸವೇಶ್ವರರು ಏನು ಮಾಡಿದರು ಎಂಬುದನ್ನು ನಾವಿಂದು ತಿಳಿದುಕೊಳ್ಳಬೇಕಿದೆ ಎಂದು ಬೆಂಗಳೂರು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಹೇಳಿದರು.

ನಗರದ ಬಸವ ಕೇಂದ್ರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಚಿಂತನ ಕಾರ್ತಿಕ ಉಪನ್ಯಾಸ ಮಾಲಿಕೆ ಉದ್ಘಾಟಿಸಿ ಮಾತನಾಡಿದ ಅವರು, ನಾವು ಬಸವಣ್ಣನ ಸಮಾಜದಲ್ಲಿ ಹುಟ್ಟಿದ್ದೇವೆ ಎಂಬ ಕಾರಣಕ್ಕೆ ಅವರ ಬಗ್ಗೆ ತಿಳಿಯಬೇಕು ಎಂದೇನಿಲ್ಲ. ನಾವು ನೋಡುವ ದೃಷ್ಟಿಕೋನ ಬದಲಾಗಬೇಕು. ಬಸವಣ್ಣ ಕೇವಲ ಕರ್ನಾಟಕಕ್ಕೆ ಸೀಮಿತವಾಗಬಾರದು ಎಂದರು.

ಕಳೆದ 25 ವರ್ಷಗಳಿಂದ ನಿರಂತರವಾಗಿ ಬಸವ ತತ್ವಗಳನ್ನು ಮನನ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದೇನೆ. ಬಸವಣ್ಣನನ್ನು ಅರ್ಥೈಸಿಕೊಳ್ಳಲು ಇಷ್ಟು ವರ್ಷ ಬೇಕಾಯಿತೇ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ. ಬಸವಣ್ಣನ ಜೀವನವನ್ನು ನಾವು ಹೇಗೆ ಗ್ರಹಿಸುತ್ತೇವೆ ಎಂಬ ಪ್ರಶ್ನೆ ಇಂದಿಗೂ ಇದೆ ಎಂದು ಹೇಳಿದರು.

ನಾನು ಯಾರು? ಎಲ್ಲಿಂದ ಬಂದೆ? ಯಾವ ಕಾರಣಕ್ಕೆ ಬಂದೆ? ಮುಂದಿನ ದಾರಿ ಯಾವುದು? ಎಂಬುದನ್ನು ಅರಿತುಕೊಳ್ಳಬೇಕು. ಈ ಅರಿವಿನ ಹಾದಿ ನಮಗೆ ದಿಕ್ಸೂಚಿಯಾಗಬೇಕು. ಅರಿವಿನ ಕೊರತೆಯಿಂದ ನಡೆದುಕೊಳ್ಳುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ವಚನದಲ್ಲಿರುವ ಒಂದೊಂದು ಸಾಲು ನಮ್ಮ ಬದುಕಿನ ಸತ್ಯ ಅರಿತುಕೊಳ್ಳಲು ಸಾಧ್ಯ. ನಾವು ಕೇಳುವ ಉಪನ್ಯಾಸವನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಇಲ್ಲದಿದ್ದರೆ ಉಪನ್ಯಾಸ ವ್ಯರ್ಥವಾಗುತ್ತದೆ. ವಚನಗಳನ್ನು ಕಂಠಪಾಠ ಮಾಡಿ ಸುಶ್ರಾವ್ಯವಾಗಿ ಹಾಡಿದರಷ್ಟೇ ಸಾಲದು. ಅವುಗಳ ಸಾರವನ್ನು ಅರ್ಥೈಸಿಕೊಳ್ಳಬೇಕು ಎಂದರು.

ನನ್ನ ತಂದೆ ಬಿ.ಡಿ.ಜತ್ತಿ ರಾಷ್ಟ್ರಪತಿಯಾಗಿದ್ದ ಸಂದರ್ಭದಲ್ಲಿ ವಿಭೂತಿ ಧರಿಸಿದ್ದನ್ನು ಪತ್ರಕರ್ತರು ಪ್ರಶ್ನೆ ಮಾಡಿದ್ದರು. ನಾನು ರಾಷ್ಟ್ರಪತಿಯಾಗಿದ್ದೇನೆ ಎಂಬ ಕಾರಣಕ್ಕೆ ವಿಭೂತಿ ಧಾರಣೆ ಮಾಡಿಲ್ಲ. ನನ್ನೊಳಗಿನ ಮಹಾಲಿಂಗಕ್ಕೆ ವಿಭೂತಿ ಹಚ್ಚಿದ್ದೇನೆ ಎಂದು ನನ್ನ ತಂದೆ ಉತ್ತರ ನೀಡಿದ್ದು ಎಂದು ಅರವಿಂದ ಜತ್ತಿ ಹೇಳಿದರು.

ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಸವಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ, ಸಾಹಿತಿ ಜಯಾ ಶೇಖರ್, ವಿದ್ಯುತ್ ನೌಕರರ ಸಂಘದ ಟಿ.ಇ.ಚಂದ್ರಕಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net