

ಶಿವಮೊಗ್ಗ: ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಕಾರ್ಯನಿರ್ವಹಿಸುವ ಗ್ರಾಮದಲ್ಲೇ ವಾಸಿಸುವಂತೆ ಸರ್ಕಾರ ನಿಗಾ ವಹಿಸಬೇಕೆಂದು ಆಗ್ರಹಿಸಿ ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘದ ಪ್ರಮುಖರು ಬುಧವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸರ್ಕಾರದ ಜನಪರ ಯೋಜನೆಗಳು ಪಂಚಾಯಿತಿ ಮಟ್ಟದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳ್ಳಬೇಕಿದೆ. ಇದರಲ್ಲಿ ಪಿಡಿಒ ಪಾತ್ರ ಮಹತ್ತರವಾದುದು. ಹೀಗಾಗಿ ತಾವು ಕೆಲಸ ಮಾಡುವ ಊರಿನಲ್ಲೇ ವಾಸಿಸಿದರೆ ಯೋಜನೆಗಳ ಪ್ರಗತಿಗೆ ಅವರು ಹೆಚ್ಚು ಸಮಯ ನೀಡಬಹುದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಉದ್ಯೋಗಖಾತ್ರಿ, ಕುಡಿಯುವ ನೀರು, ನೈರ್ಮಲ್ಯ, ಸ್ವಚ್ಛ ಭಾರತ ಮಿಷನ್, ಮುಖ್ಯಮಂತ್ರಿ ಗ್ರಾಮ ವಿಕಾಸ, ಜಲಾಮೃತ, ಗ್ರಾಮೀಣ ಸಂಪರ್ಕ, ಸುವರ್ಣ ಗ್ರಾಮೋದಯ ಮುಂತಾದ ಯೋಜನೆಗಳ ಪ್ರಯೋಜನ ಜನರಿಗೆ ಸಮರ್ಪಕವಾಗಿ ಸಿಗಬೇಕು. ಆನ್‌ಲೈನ್ ಸೇವೆಗಳನ್ನು ಒದಗಿಸಬೇಕು. ಪಿಡಿಒ ಗ್ರಾಮದಲ್ಲೇ ವಾಸವಿದ್ದರೆ ಜನರಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂದರು.
ಜಿಲ್ಲೆ ಬರಪೀಡಿತ ಎಂದು ಘೋಷಣೆಯಾಗಿದೆ. ಈ ಸಂದರ್ಭದಲ್ಲಿ ಪಿಡಿಒಗಳ ಪಾತ್ರ ಹೆಚ್ಚಿದೆ. ಬಹುತೇಕ ಪಿಡಿಒಗಳು ದೂರದ ಪಟ್ಟಣ ಇಲ್ಲವೇ ನಗರ ಪ್ರದೇಶಗಳಲ್ಲಿದ್ದು ಪ್ರತಿದಿನ ಗ್ರಾಪಂಗೆ ಬಂದು ಕಾರ್ಯನಿರ್ವಹಿಸುತ್ತಾರೆ. ಕೆಲವರು ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುವುದಿಲ್ಲ. ಹಲವರು ನಿಗದಿತ ಅವಧಿಗೆ ಮುಂಚಿತವಾಗಿಯೇ ಕಚೇರಿಯಿಂದ ತೆರಳುತ್ತಾರೆ ಎಂದು ದೂರಿದರು.
ಪಿಡಿಒಗಳು ಗ್ರಾಮದಲ್ಲೇ ವಾಸ ಮಾಡುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಆದೇಶಿಸಿದ್ದಾರೆ. ಇದು ಕಟ್ಟುನಿಟ್ಟಾಗಿ ಪಾಲನೆಯಾದರೆ ಗ್ರಾಮೀಣ ಭಾಗದ ಜನರಿಗೂ ಅನುಕೂಲವಾಗಲಿದೆ ಎಂದು ಹೇಳಿದರು.
ಅಭಿಮಾನಿ ಬಳಗದ ಅಧ್ಯಕ್ಷ ಆರ್.ಮೋಹನ್, ಕಾಂಗ್ರೆಸ್ ಜಿಲ್ಲಾ ವಕ್ತಾರ ರಮೇಶ್ ಶೆಟ್ಟಿ ಶಂಕರಘಟ್ಟ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಡಿ.ಮಂಜುನಾಥ್, ಪ್ರಮುಖರಾದ ಸಿದ್ದಪ್ಪ, ಶಿಕಾರಿಪುರ ಸುರೇಶ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.