

ಸಾಗರ: ನನೆಗುದಿಗೆ ಬಿದ್ದಿರುವ ಗುರುಭವನ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಶಿಕ್ಷಕರ ಸಂಘಟನೆ ಮುಂದಾಗಬೇಕು. ಸಂಘಟನೆ ಸದೃಢಗೊಳಿಸುವ ಹಾಗೂ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡುವ ಹೋಗಬೇಕಾದ ಜವಾಬ್ದಾರಿ ಇದೆ ಎಂದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಜಿ.ಪರಮೇಶ್ವರಪ್ಪ ಹೇಳಿದರು.
ಸಾಗರದ ಅಜಿತ ಸಭಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕ ಸಮೂಹ ಅತ್ಯಂತ ದೊಡ್ಡದು. ಶಿಕ್ಷಕರ ಜ್ವಲಂತ ಸಮಸ್ಯೆಗಳ ಬಗ್ಗೆ ಸಂಘ ಹೆಚ್ಚಿನ ಗಮನ ಹರಿಸಬೇಕು. ಸಂಘಟನೆಯ ಮುಖ್ಯ ಹುದ್ದೆಯಲ್ಲಿ ಇರುವವರಿಗೆ ತಾಳ್ಮೆ, ನೇರ ನಡೆ-ನುಡಿ ಅಗತ್ಯ ಮತ್ತು ಅನಿವಾರ್ಯ. ಹೊಸ ಪಿಂಚಣಿ ಪದ್ಧತಿ ರದ್ದತಿಗೆ ನೌಕರರ ಸಂಘ ಈಗಾಗಲೇ ಸರ್ಕಾರದ ಮೇಲೆ ಒತ್ತಡ ಹೇರಿದೆ ಎಂದು ತಿಳಿಸಿದರು.
ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷ ಕೆ.ಜಗನ್ನಾಥ್ ಮಾತನಾಡಿ, ಗುರುಭವನ ಕಾಮಗಾರಿ ಪೂರ್ಣಗೊಳಿಸಲು ಶಿಕ್ಷಕರು ಹಣ ಕೊಡಲು ಸಿದ್ಧರಿದ್ದಾರೆ. ಬಿಇಒ ಅವರು ಗಮನ ಹರಿಸಬೇಕು. ಶಿಕ್ಷಕರಿಗೆ ವಿದ್ಯಾರ್ಹತೆಗೆ ತಕ್ಕ ಬಡ್ತಿ ದೊರೆಯಬೇಕು. ಆದರೆ ಕೆಲ ಐಎಎಸ್ ಅಧಿಕಾರಿಗಳು ಅಡ್ಡಗಾಲಾಗಿದ್ದಾರೆ. ವೃಂದ ನೇಮಕಾತಿ ನಿಯಮದಲ್ಲಿ ಸಹ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ ಎಂದರು.
ಶಿಕ್ಷಕರ ಸಂಘದ ನೂತನ ಅಧ್ಯಕ್ಷ ಮಾಲತೇಶ್ ಮಾತನಾಡಿ, ಶಿಕ್ಷಕಸ್ನೇಹಿಯಾಗಿ ಸಂಘ ಮುನ್ನಡೆಸಲಾಗುತ್ತದೆ. ಈಗಾಗಲೇ ಶಿಕ್ಷಕರಿಗೆ ಅನುಕೂಲವಾಗಲು ಸದ್ಗುರು ಟೀಚರ್ಸ್ ಕಾರ್ನರ್ ಪ್ರಾರಂಭಿಸಿದ್ದು, ಉಚಿತವಾಗಿ ಟ್ಯಾಕ್ಸ್ ರಿಟರ್ನ್ ಫೈಲ್, ಶಿಕ್ಷಕರಿಗೆ ಉಚಿತ ವೇತನ ಪ್ರಮಾಣ ಪತ್ರ, ರಿಯಾಯಿತಿ ದರದಲ್ಲಿ ಶಿಕ್ಷಕರಿಗೆ ಆನ್‌ಲೈನ್ ಸೇವೆ ನೀಡಲು ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದರು.
ಸಾಗರ ಬಿಇಒ ಪರಶುರಾಮಪ್ಪ, ಪ್ರಮುಖರಾದ ಬಸವರಾಜಪ್ಪ, ಚಂದ್ರಪ್ಪ, ಭೂಮೇಶ್, ಎ.ಎಸ್.ಶಾರದಾ, ಲಕ್ಷ್ಮಣ, ನಾಯಕ್, ಇ.ಪ್ರಭು, ಎಲ್.ಟಿ.ಗವಿಯಪ್ಪ, ಎಚ್.ಸೋಮಪ್ಪ, ಸತ್ಯನಾರಾಯಣ, ಎಂ.ಎಸ್.ಮಂಜುನಾಥ, ಹೂವಪ್ಪ, ಕವಿರಾಜ್, ವಿಕ್ಟೋರಿಯಾ ಫಟಾರ್ಡೋ, ಸತೀಶ್, ಪಾರ್ವತಮ್ಮ, ಗಣಪತಪ್ಪ, ದಿನೇಶ್, ಟಿ.ವಿ.ಮನೋಹರಪ್ಪ, ಪವಿತ್ರಾ ಇತರರಿದ್ದರು.