ದನಿ ಇಲ್ಲದವರ ಪರ ಮಾಧ್ಯಮ ದನಿ ಎತ್ತಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ

press club
Published on

ಬೆಂಗಳೂರು ಮಾಧ್ಯಮವು ಸಮಾಜದಲ್ಲಿ ದನಿ ಇಲ್ಲದವರ ಪರವಾಗಿ ದನಿ ಎತ್ತುವ ಕೆಲಸವನ್ನು ವಸ್ತುನಿಷ್ಠವಾಗಿ ಮಾಡಬೇಕು. ಸರ್ಕಾರದ ತಪ್ಪುಗಳನ್ನು ತಪ್ಪೆಂದು ಹೇಳುವ ದಾರ್ಷ್ಟ್ಯವನ್ನು ಪತ್ರಕರ್ತರು ಬೆಳೆಸಿಕೊಳ್ಳಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಭಾನುವಾರ ಬೆಂಗಳೂರು ಪ್ರೆಸ್‌ಕ್ಲಬ್‌ನ 2023ನೇ ಸಾಲಿನ ವರ್ಷದ ವ್ಯಕ್ತಿ, ವಿಶೇಷ ಪ್ರಶಸ್ತಿ ಮತ್ತು ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಅವರು ಮಾತನಾಡಿದರು.

ಮಾಧ್ಯಮಗಳು ಕ್ಲುಲ್ಲಕ ವಿಷಯಗಳಿಗೆ ಮಹತ್ವ ನೀಡಬಾರದು. ಮೌಢ್ಯ ಮತ್ತು ಕಂದಾಚಾರ ಬೆಳೆಸುವ ಕೆಲಸ ಮಾಡಬಾರದು. ಯಾವುದೇ ಸರ್ಕಾರವಿರಲಿ ಸರ್ಕಾರದ ತಪ್ಪುಗಳನ್ನು ತಪ್ಪೆಂದು ಹೇಳಬೇಕು. ಆದರೆ, ಇಂದಿನ ಬಹುತೇಕ ಮಾಧ್ಯಮಗಳು ಉದ್ದಿಮೆಗಳ ಕೈಗೆ ಸಿಲುಕಿದೆ.

ಉದ್ಯಮಿಗಳಿಗೆ ದೇಶ, ಸಮಾಜ ಮತ್ತು ಜನರ ಬಗ್ಗೆ ಕಳಕಳಿ ಇರುವುದಿಲ್ಲ. ಸಮಾಜವನ್ನು ಗಮನದಲ್ಲಿಟ್ಟುಕೊಂಡು ಆತ್ಮಸಾಕ್ಷಿಗೆ ಅನುಗುಣವಾಗಿ ಮಾಧ್ಯಮ ಕೆಲಸ ಮಾಡಿದಾಗ ಸಮಾಜಕ್ಕೆ ಒಳ್ಳೆಯದಾಗುತ್ತದೆ ಎಂದು ಹೇಳಿದರು.

ನಮಗೆ ಸಂವಿಧಾನವೇ ಧರ್ಮಗ್ರಂಥ:

ಸುದೀರ್ಘ ಚರ್ಚೆಯ ನಂತರ ದೇಶದ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯ ಆಧಾರದಲ್ಲಿ ಸಂವಿಧಾನ ರಚನೆ ಮಾಡಲಾಗಿದೆ. ಅದನ್ನು ಗೌರವಿಸುವುದು ಮತ್ತು ಅದರಂತೆ ನಡೆದುಕೊಳ್ಳುವುದು ಎಲ್ಲ ರಾಜಕೀಯ ಪಕ್ಷಗಳ ಕರ್ತವ್ಯವಾಗಿದೆ ಎಂದು ಹೇಳಿದರು.

ನಮಗೆ ಸಂವಿಧಾನವೇ ಧರ್ಮಗ್ರಂಥವಾಗಿದೆ. ನಾವೆಲ್ಲರೂ ರಾಜಕೀಯ ಧರ್ಮವನ್ನು ಅನುಸರಿಸಿದಾಗ ಮಾತ್ರ ಸಂವಿಧಾನಕ್ಕೆ ಗೌರವ ನೀಡಿದಂಗಾಗಲಿದೆ. ದೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಬೇಕು. ಅವಕಾಶದಿಂದ ವಂಚಿತರಾದವರಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮಾನತೆ ಸಿಕ್ಕಾಗ ಸಮಾನತೆ ಸಾಧ್ಯವಾಗಲಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net