ಭ್ರಷ್ಟಾಚಾರ ತಡೆಗೆ ವಕೀಲರು ಮುಂದಾಗಲಿ

tgt LAW
ಉಳ್ಳೂರು ಸಿಗಂದೂರೇಶ್ವರಿ ಕಾಲೇಜಿನಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಎಸ್.ಸಂತೋಷ್ ಉದ್ಘಾಟಿಸಿದರು. ಚಂದ್ರಶೇಖರ್, ವಿ.ಎಸ್.ವಿನಯ್, ಈ.ನಾಗರಾಜ್, ಎಚ್.ಬಿ.ರಮೇಶ್ ಇನ್ನಿತರರಿದ್ದರು.
Published on

ತ್ಯಾಗರ್ತಿ: ಭ್ರಷ್ಟಾಚಾರ ತಡೆಗಟ್ಟಲು ಕರ್ನಾಟಕ ಲೋಕಾಯುಕ್ತ ಕಾಯ್ದೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಕೀಲರು ಹಾಗೂ ಕಾನೂನು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್.ಸಂತೋಷ್ ಹೇಳಿದರು.

ಉಳ್ಳೂರು ಶ್ರೀ ಸಿಗಂದೂರೇಶ್ವರಿ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಸಾಗರ ಗಂಗೋತ್ರಿ ಕಾನೂನು ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಕಾನೂನು ಸೇವಾ ದಿನದ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಕಾನೂನು ಅರಿವು ಜಾಗೃತಿ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಐದು ವರ್ಷ ಕಾರ್ಯ ನಿರ್ವಹಿಸಿದ ಅನುಭವಗಳನ್ನು ವಿವರಿಸಿದರು. ಭ್ರಷ್ಟಾಚಾರ ಕೊನೆಗೊಳಿಸಲು ಜಾರಿಗೆ ತಂದ ಲೋಕಾಯುಕ್ತ ಕಾಯ್ದೆ ಹೇಗೆ ಓದಿ ತಿಳಿಯಬೇಕು, ಲೋಕಾಯುಕ್ತದಲ್ಲಿ ದೂರು ನೀಡುವ ವಿಧಾನ, ವಿಚಾರಣೆ ಹೇಗೆ ನಡೆಯಲಿದೆ, ಯಾವ ರೀತಿ ಕೊನೆಗೊಳ್ಳುತ್ತದೆ. ಲೆಕ್ಕ ಪರಿಶೋಧನೆ ಹೇಗೆ ನಡೆಯಲಿದೆ ಎಂಬುದನ್ನು ವಿವರಿಸಿದರು. ಸಹಾಯಕ ಸರ್ಕಾರಿ ಅಭಿಯೋಜಕ ಎಚ್.ಎಸ್.ಚಂದ್ರಶೇಖರ್ ಮಾತನಾಡಿ, ಉಚಿತ ಕಾನೂನು ಸಲಹೆ ಪಡೆಯುವ ವಿಧಾನ, ಮೋಟಾರ್ ವಾಹನ ಕಾಯ್ದೆ, ಮಹಿಳಾ ಹಕ್ಕುಗಳು ಮತ್ತು ಬಿಎನ್‌ಎಸ್ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು.

ಕಾನೂನು ಸಲಹೆಗಾರರಾದ ಸುಚಿತ್ರಾ, ವಕೀಲರ ಸಂಘದ ಅಧ್ಯಕ್ಷ ಇ.ನಾಗರಾಜ್, ಕಾರ್ಯದರ್ಶಿ ಎಚ್.ಬಿ.ರಮೇಶ್, ಖಜಾಂಚಿ ಕಿರಣ್‌ಕುಮಾರ್, ಪ್ರಾಚಾರ್ಯ ವಿ.ಎಸ್.ವಿನಯ್, ಉಪನ್ಯಾಸಕರಾದ ಜ್ಯೋತಿ, ವಿನಾಯಕ ಹೆಗಡೆ, ಚಿದಾನಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net