

ಬೆಟ್ಟದಪುರ: ಕನ್ನಡ ರಾಜ್ಯೋತ್ಸವ ನಿತ್ಯೋತ್ಸವ ಆಗಲಿ ಎಂದು ಕನ್ನಡ ಸಾಹಿತ್ಯ ಪರಿಪತ್‌ನ ಚಪ್ಪರದಹಳ್ಳಿ ಘಟಕದ ಸಂಘಟನಾ ಕಾರ್ಯದರ್ಶಿ ಸಂತೋಷ್ ಪಟೇಲ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿ ಗ್ರಾಮದ ಕುವೆಂಪು ವೃತ್ತದ ಬಳಿ ಬುಧವಾರ ಕನ್ನಡ ಸಾಹಿತ್ಯ ಪರಿಷತ್‌ನ ಗ್ರಾಮ ಘಟಕ ವತಿಯಿಂದ ಆಯೋಜಿಸಿದ್ದ 68ನೇ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ರಾಜ್ಯೋತ್ಸವವನ್ನು ಶಾಲಾ ಕಾಲೇಜು ಸೇರಿದಂತೆ ಪ್ರತಿ ಗ್ರಾಮದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಗುತಿತ್ತು. ಕಾಲಕ್ರಮೇಣ ಆಚರಣೆಯ ಸಂಖ್ಯೆ ಕಡಿಮೆಯಾಯಿತು ಎಂದು ಕಳವಳ ವ್ಯಕ್ತಪಡಿಸಿದರು.
ನಮ್ಮ ಭಾಷೆ, ನೆಲ, ಜಲ ಉಳಿಸಿ ಬೆಳೆಸುವ ಕರ್ತವ್ಯ ಪ್ರತಿಯೊಬ್ಬ ಕನ್ನಡಿಗರ ಜನ್ಮಸಿದ್ಧ ಹಕ್ಕು. ಹಾಗಾಗಿ ಪ್ರತಿ ಗ್ರಾಮದಲ್ಲಿ ರಾಜ್ಯೋತ್ಸವ ಆಚರಣೆ ಕುರಿತಂತೆ ಸರ್ಕಾರವು ಸ್ಥಳೀಯವಾಗಿ ಸಹಕಾರ ನೀಡಬೇಕು. ಅಲ್ಲದೆ ಕನ್ನಡಿಗರೂ ಒಗ್ಗೂಡಿ ಕನ್ನಡ ಭಾಷೆ ಕಟ್ಟುವ ಕೆಲಸಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.
ರಾಜ್ಯೋತ್ಸವ ಹಿನ್ನೆಲೆ ಚಪ್ಪರದಹಳ್ಳಿ ಕನ್ನಡ ಸಾಹಿತ್ಯ ಪರಿಷತ್‌ನ ಗ್ರಾಮ ಘಟಕದ ಅಧ್ಯಕ್ಷ ಮುಕುಂದಚಾರಿ ಧ್ವಜಾರೋಹಣ ಮಾಡಿದರು. ಗ್ರಾಮದ ಮುಖಂಡರಾದ ಅಪ್ಪಣ್ಣ, ರಾಮೇಗೌಡ, ಸಿದ್ದಲಿಂಗೇಗೌಡ, ನಂಜುಂಡೇಗೌಡ, ಸಿ.ಆರ್ ಆಂಜನಿಗೌಡ, ಸಿ.ಜೆ ರವಿ, ಪ್ರದೀಪ್, ರಮೇಶ್, ಶಿವಣ್ಣ, ಸ್ವಾಮಿ, ಕೌಶಿಕ್, ಭಾಸ್ಕರ್, ಸಚಿನ್, ಶಿವ, ಶಶಾಂಕ್, ಚೇತನ್, ಆಕಾಶ್, ರಂಗಸ್ವಾಮಿ, ರವಿ, ದರ್ಶನ್, ಬಾಬು ಕಿಚ್ಚ, ಹೇಮಂತ್ ಸೇರಿದಂತೆ ಪದಾಧಿಕಾರಿಗಳು ಗ್ರಾಮಸ್ಥರು ಇದ್ದರು.