ಕಾಂತರಾಜ್, ಸದಾಶಿವ ವರದಿ ಜಾರಿಯಾಗಲಿ: ಮೊಹಮ್ಮದ್ ಸನಾವುಲ್ಲಾ

mohammada sanaulla
ಅಹಿಂದ ಚಳವಳಿ ಸಂಘಟನೆ ರಾಜ್ಯ ಜಂಟಿ ಸಂಚಾಲಕ ಮೊಹಮ್ಮದ್ ಸನಾವುಲ್ಲಾ
Published on

ಶಿವಮೊಗ್ಗ: ಜಾತಿ ಗಣತಿಯ ಕಾಂತರಾಜ್ ವರದಿ ಮತ್ತು ಪರಿಶಿಷ್ಟ ಜಾತಿಗಳ ಒಳಮೀಸಲಾತಿಯ ಸದಾಶಿವ ಆಯೋಗದ ವರದಿಯನ್ನು ತಕ್ಷಣ ಜಾರಿಗೊಳಿಸುವಂತೆ ಅಹಿಂದ ಚಳವಳಿ ಸಂಘಟನೆ ರಾಜ್ಯ ಜಂಟಿ ಸಂಚಾಲಕ ಮೊಹಮ್ಮದ್ ಸನಾವುಲ್ಲಾ ಆಗ್ರಹಿಸಿದರು.

ಕಾಂತರಾಜ್ ವರದಿ ಜಾರಿಗೆ ಶೇ. 22ರಷ್ಟು ಮಂದಿ ವಿರೋಧ ಮಾಡುತ್ತಿದ್ದಾರೆ. ಆದರೆ ವರದಿ ಜಾರಿಯಾಗದೇ ಶೇ. 78ರಷ್ಟು ಮಂದಿಗೆ ಅನ್ಯಾಯವಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಒತ್ತಡಗಳಿಗೆ ಮಣಿಯದೆ ವರದಿ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
2013ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರವಿದ್ದಾಗಲೇ ಕಾಂತರಾಜ್ ಆಯೋಗ ಸಮೀಕ್ಷೆ ನಡೆಸಿದ್ದು, ಇದೀಗ ಅವರೇ ಸಿಎಂ ಆಗಿರುವುದರಿಂದ ವರದಿ ಜಾರಿಯಾಗುವ ಭರವಸೆ ಇದೆ. ವರದಿ ಜಾರಿಗೊಳಿಸದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಂಘಟನೆ ಜಿಲ್ಲಾ ಮುಖ್ಯ ಸಂಚಾಲಕ ಜಿ.ಪರಮೇಶ್ವರಪ್ಪ ಮಾತನಾಡಿ, ಅಹಿಂದ ಸಮುದಾಯಗಳಿಗೆ ನ್ಯಾಯ ಸಿಗುವುದು ಕೆಲ ಬಲಾಢ್ಯ ಜಾತಿಗಳಿಗೆ ಇಷ್ಟವಿಲ್ಲ. ಅನಗತ್ಯ ಆತಂಕ ವ್ಯಕ್ತಪಡಿಸುತ್ತಿವೆ ಎಂದರು.
ಶಾಮನೂರು ಶಿವಶಂಕರಪ್ಪ ಅವರಿಗೆ ಅಹಿಂದ ಸಮುದಾಯಗಳಿಗೆ ನ್ಯಾಯ ಕೊಡಿಸುವ ಕಾಂತರಾಜ್ ವರದಿ ಬೇಡವಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ 13 ಲಕ್ಷ ಇರುವ ಅಹಿಂದ ಮತಗಳು ಕೈ ತಪ್ಪಿಹೋಗುವ ಆತಂಕದಿಂದ ವರದಿ ಜಾರಿಗೆ ವಿರೋಧಿಸುತ್ತಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಸಂಚಾಲಕ ಶಂಕರರಾವ್, ಅತ್ತಿಗುಂದ ಚಂದ್ರಶೇಖರಪ್ಪ, ಜೆ.ಭಾಸ್ಕರ್, ಹಸನ್ ಆಲಿಖಾನ್ ಆಫ್ರೀದಿ, ಚನ್ನವೀರಪ್ಪ ಗಾಮನಗಟ್ಟಿ, ನೇತಾಜಿ ಇಕ್ಬಾಲ್ ಸುದ್ದಿಗೋಷ್ಠಿಯಲ್ಲಿದ್ದರು.

ಎಲ್ಲ ವರ್ಗದವರಿಗೂ ಸಿಗಲಿದೆ ನ್ಯಾಯ, ಹಕ್ಕು
ರಾಜ್ಯದ ಜನರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ಕಾಂತರಾಜ್ ಆಯೋಗದ ವರದಿ ವೈಜ್ಞಾನಿಕವಾಗಿದ್ದು, ವರದಿ ಅನುಷ್ಠಾನದಿಂದ ರಾಜ್ಯದ ಎಲ್ಲ ವರ್ಗದವರಿಗೂ ನ್ಯಾಯ ಮತ್ತು ಹಕ್ಕು ಸಿಗಲಿದೆ ಎಂದು ಕಾಂತರಾಜ್ ಆಯೋಗದ ಮಾಜಿ ಸದಸ್ಯ ಎನ್.ಪಿ.ಧರ್ಮರಾಜ್ ಸ್ಪಷ್ಟಪಡಿಸಿದರು. ಕಾಂತರಾಜ್ ಆಯೋಗವು ನಾನು ಸೇರಿದಂತೆ ಐದು ಜನರ ಆಯೋಗ. ಜಿಲ್ಲಾಧಿಕಾರಿ ಉಸ್ತುವಾರಿಯಲ್ಲಿ ಶೈಕ್ಷಣಿಕ ಇಲಾಖೆ ಸಿಬ್ಬಂದಿ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದು, ತಜ್ಞರು ಅಂಕಿಅಂಶಗಳನ್ನು ಕ್ರೋಡೀಕರಣ ಮಾಡಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net