ವಿಜಯವಾಣಿ ಸಂಪಾದಕೀಯ: ಆರೋಗ್ಯ ವ್ಯವಸ್ಥೆ ಸನ್ನದ್ಧವಾಗಲಿ

Fever
Published on

ಕರೊನಾ ಸೋಂಕಿನ ಎರಡನೇ ಅಲೆ ನಿಯಂತ್ರಣಕ್ಕೆ ಬಂದು, ಶಾಲೆ ಸೇರಿದಂತೆ ಎಲ್ಲ ಚಟುವಟಿಕೆಗಳು ಹಿಂದಿನ ಸ್ಥಿತಿಗೆ ಮರಳಿವೆ. ಪರಿಸ್ಥಿತಿ ಹೀಗೆ ಸಹಜವಾಗಿ ಇರಬೇಕು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗಬಾರದು ಎಂದು ಆಶಿಸುತ್ತಿರುವಾಗಲೇ ರಾಜ್ಯಕ್ಕೆ ಸರಣಿ ರೋಗಗಳು ಕಾಡುತ್ತಿವೆ. ಇದಕ್ಕೆ ಪ್ರಮುಖ ಕಾರಣ ಹವಾಮಾನ ಬದಲಾವಣೆ. ಈ ಬಾರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿ ಮತ್ತು ಅಕ್ಟೋಬರ್ ಆರಂಭದಲ್ಲಿ ಸುರಿದ ಅಕಾಲಿಕ ಮಳೆಯಂತೂ ಹಲವು ಅನಾಹುತಗಳನ್ನು ಸೃಷ್ಟಿಸಿದೆ.

ಇನ್ನೇನು ಮಳೆಯ ಅಬ್ಬರ ಕೊಂಚ ಕಡಿಮೆಯಾಯಿತು ಎಂಬುವಷ್ಟರಲ್ಲಿ, ಹಿಂಗಾರಿನ ಪ್ರವೇಶವಾಗಿದೆ. ಹೀಗಾಗಿ ಮುಂದಿನ ಕೆಲ ದಿನಗಳ ಕಾಲ ಮತ್ತೆ ವರುಣಾರ್ಭಟ ರಾಜ್ಯವನ್ನು ಕಾಡುವ ಸಾಧ್ಯತೆ ಇದೆ. ಅತಿಯಾದ ಮಳೆ, ತೇವಾಂಶ ಹೆಚ್ಚಿದ ಪರಿಣಾಮ ಚಳಿಯ ವಾತಾವರಣ, ಅದರ ಬೆನ್ನಲ್ಲೇ ಬಿಸಿಲಿನ ಶಾಖ ಹೀಗೆ ಹವಾಮಾನದ ಕ್ಷೀಪ್ರ ಬದಲಾವಣೆ ಎಲ್ಲ ವಯಸ್ಸಿನವರ ಆರೋಗ್ಯದ ಮೇಲೆ ಅದರಲ್ಲೂ ಚಿಕ್ಕಮಕ್ಕಳು ಮತ್ತು ವಯಸ್ಸಾದವರ ಸ್ವಾಸ್ಥ್ಯದ ಮೇಲೆ ಹೆಚ್ಚು ಪ್ರತಿಕೂಲ ಪರಿಣಾಮ ಬೀರಿದೆ. ಇದು ಜನಸಾಮಾನ್ಯರಿಗೆ ಹೊಸ ಸಮಸ್ಯೆ ಸೃಷ್ಟಿಸಿದರೆ, ಆರೋಗ್ಯ ಕ್ಷೇತ್ರಕ್ಕೆ ಮಗದೊಂದು ಸವಾಲು.

ನಗರಪ್ರದೇಶಗಳಲ್ಲಿ ಚಿಕಿತ್ಸೆಯ ಲಭ್ಯತೆ ಇದ್ದರೂ, ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳ ಕೊರತೆ ಕಾಡುತ್ತಿರುವುದರಿಂದ, ಜನರು ಪರದಾಡುವಂತಾಗಿದೆ. ಈ ಬಗ್ಗೆ ಕೆಲ ದಿನಗಳ ಹಿಂದೆ ‘ವಿಜಯವಾಣಿ’ ವಿವರವಾದ ವರದಿ ಪ್ರಕಟಿಸಿತ್ತು. ಇನ್ನು, ಗ್ರಾಮೀಣ ಪ್ರದೇಶದ ಸ್ಥಿತಿಯಂತೂ ದೇವರಿಗೇ ಪ್ರೀತಿ. ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಸರ್ಕಾರ ಹಲವು ಬಾರಿ ಆಶ್ವಾಸನೆ ನೀಡಿದೆಯಾದರೂ, ಅದಿನ್ನೂ ಭರವಸೆಯಾಗಿಯೇ ಉಳಿದುಕೊಂಡಿದೆ.

ದೀಪಾವಳಿ ಹಬ್ಬ ಬೇರೆ ಹತ್ತಿರದಲ್ಲಿದ್ದು, ಆ ಬಳಿಕವೂ ಸಾಲು-ಸಾಲು ಹಬ್ಬಗಳಿವೆ. ಜನರ ಓಡಾಟ ಖರೀದಿ ಸೇರಿದಂತೆ ಹಲವು ಕಾರಣಗಳಿಗಾಗಿ ಹೆಚ್ಚಿದೆ. ಊರಿಗೆ ತೆರಳುವವರ ಸಂಖ್ಯೆಯೂ ಈ ಅವಧಿಯಲ್ಲಿ ಹೆಚ್ಚು. ಹಾಗಾಗಿ, ಆರೋಗ್ಯ ವ್ಯವಸ್ಥೆಯನ್ನು ಸನ್ನದ್ಧವಾಗಿ ಇರಿಸುವ ಜವಾಬ್ದಾರಿ ಸರ್ಕಾರದ ಮೇಲಿದ್ದರೆ, ಸೂಕ್ತ ಸುರಕ್ಷತಾ ಕ್ರಮಗಳನ್ನು ಪಾಲಿಸುವ ಹೊಣೆ ಜನರ ಮೇಲಿದೆ. ಡೆಂಘ, ಚಿಕುನ್ ಗುನ್ಯಾ, ತೀವ್ರ ಉಸಿರಾಟದ ಸಮಸ್ಯೆ, ಶೀತಜ್ವರ ಮತ್ತು ಅಸ್ತಮಾದಂತಹ ಸಮಸ್ಯೆಗಳು ಉಲ್ಬಣಿಸುತ್ತಿರುವುದರಿಂದ ಜೀವನಶೈಲಿಯಲ್ಲೂ ಸೂಕ್ತ ಮಾರ್ಪಾಡು ಮಾಡಿಕೊಳ್ಳಬೇಕು. ಕುದಿಸಿ ಆರಿಸಿದ ಶುದ್ಧ ನೀರು, ತಾಜಾ ಆಹಾರದ ಸೇವನೆಗೆ ಆದ್ಯತೆ ನೀಡಬೇಕು. ಮುಖಗವಸು ಧರಿಸುವುದು, ಸುರಕ್ಷಿತ ಅಂತರ ಕಾಪಾಡಿಕೊಳ್ಳುವುದು, ಸ್ವಚ್ಛತೆ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆರೋಗ್ಯ ಇಲಾಖೆ ಔಷಧ ಮತ್ತು ಇತರ ಚಿಕಿತ್ಸಾ ಪರಿಕರಗಳ ಕೊರತೆ ನಿವಾರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಆರೋಗ್ಯದ ಸಮಸ್ಯೆ ಜನರ ಆರ್ಥಿಕ ಹೊರೆಯನ್ನೂ ಹೆಚ್ಚಿಸುತ್ತದೆ. ಈ ನಿಟ್ಟಿನಲ್ಲಿ ಆರೋಗ್ಯ ಕಾಳಜಿಯೇ ಪ್ರಧಾನ ಆದ್ಯತೆಯಾದರೆ; ಸರ್ವರಿಗೂ ಕ್ಷೇಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net