

ಕೋಲಾರ: ಜಾತಿ, ಧರ್ಮದ ಆಧಾರದ ಮೇಲೆ ಕಾನೂನು, ಕಾಯ್ದೆಗಳು ರಚನೆಯಾಗುತ್ತಿದ್ದು, ಇದು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಸಂಸ್ಕೃತಿ ದಿವಾಳಿತನಕ್ಕೆ ಕಾರಣವಾಗುತ್ತಿದೆ. ಜಾತಿ, ಧರ್ಮ ತಾರತಮ್ಯವನ್ನು ಹೋಗಲಾಡಿಸಲು ಸರ್ಕಾರ ಮುಂದಾಗಲಿ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಹೇಳಿದರು.
ನಗರದ ನಚಿಕೇತನ ನಿಲಯದಲ್ಲಿ ಬುಡ್ಡಿದೀಪ ವತಿಯಿಂದ ಅಂಬೇಡ್ಕರ್ ಓದು-2ನೇ ಕಾರ್ಯಕ್ರಮದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ `ಅಂಬೇಡ್ಕರ್ ಕಂಡ ಕನಸುಗಳು' ಮತ್ತು ಸಂವಿಧಾನ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದೆ ಗ್ರಾಮಗಳಲ್ಲಿ ನ್ಯಾಯದ ಕಟ್ಟೆಗಳು ಇದ್ದವು, ಇದರ ಪರಿಣಾಮ ನನ್ನ ವೃತ್ತಿಯ ಮೇಲೂ ಬೀರಿದೆ. ಗ್ರಾಮಾಂತರ ಪ್ರದೇಶದಲ್ಲಿ ಸತ್ಯ ಕಂಡು ಹಿಡಿಯುವುದೇ ಕಟ್ಟೆಯ ನ್ಯಾಯ. ಅವರಿಗೆ ಯಾವುದೇ ಕಾನೂನು, ಕಾಯ್ದೆಗಳ ಬಗ್ಗೆ ಅರಿವು ಇರಲಿಲ್ಲ. ಹಿರಿಯರು ಹೇಳಿದ ಕತೆಗಳು ವೃತ್ತಿಯಲ್ಲಿ ಪತಿಣಾಮ ಬೀರಿತು ಎಂದು ಮೆಲುಕು ಹಾಕಿದರು.
ಅಂಬೇಡ್ಕರ್ ಕನಸುಗಳ ಬಗ್ಗೆ ಒಂದು ಉಪನ್ಯಾಸದಲ್ಲಿ ತಿಳಿದುಕೊಳ್ಳಲು ಸಾಧ್ಯವಿಲ್ಲ. ಕಲಿಕೆ ಎಂಬುದು ಮನುಷ್ಯ ಜೀವನದಲ್ಲಿ ನಿರಂತರವಾಗಿರುತ್ತದೆ. ಸಂವಿಧಾನ ಓದುವುದು ಎಂದರೆ ಅಂಬೇಡ್ಕರ್ ಅವರನ್ನು ಓದುವುದು ಎಂದರ್ಥ, ಅಶಯಗಳು, ಕನಸುಗಳು, ಸಮಾಜದಲ್ಲಿ ಏನೆಲ್ಲ ಉದ್ದೇಶಗಳು ಈಡೇರಬೇಕು ಎಂಬುದು ಸಂವಿಧಾನದಲ್ಲಿ ಇದೆ ಎಂದು ತಿಳಿಸಿದರು.
ಎಲ್ಲ ಅಕ್ಷರಸ್ಥರಿಗೂ ಕಾನೂನು, ಸಂವಿಧಾನ ಅಗತ್ಯ ಬೇಕಾಗಿದೆ. ಸರ್ಕಾರಗಳು ಅವುಗಳನ್ನು ಜನರಿಗೆ ತಿಳಿಪಡಿಸುವ ಪ್ರಯತ್ನ ಮಾಡಲಿಲ್ಲ. ನಾವೆಲ್ಲರೂ ಮಾರುಕಟ್ಟೆಯಲ್ಲಿ ಪುಸ್ತಕ ಓದಿ ಜಾಗೃತರಾಗಲು ಮುಂದಾಗಲಿಲ್ಲ. ಸಂವಿಧಾನ ಎಂದರೆ ಕತೆ, ಕಾದಂಬರಿ, ಸಿನಿಮಾ ಅಲ್ಲ. ಮೊದಲು ದೇಶವನ್ನು ಅರ್ಥ ಮಾಡಿಕೊಳ್ಳಬೇಕು. ಜನರ ಸಂಸ್ಕೃತಿ, ಮೌಲ್ಯ, ಜಾತಿ, ರಾಜಕೀಯ ಬಗ್ಗೆ ತಿಳಿದು, ಸಂವಿಧಾನ ಪ್ರವೇಶ ಮಾಡಿದರೆ ಅರ್ಥವಾಗುತ್ತದೆ ಎಂದು ಹೇಳಿದರು.
ಕಾನೂನಿನಲ್ಲಿ ಸಮಾನ ಅವಕಾಶಗಳು:
ಸಮಾಜದಲ್ಲಿ ೪೬೩೫ ಜಾತಿ ಮತ್ತು ಉಪಜಾತಿಗಳಿವೆ. ಇದರಲ್ಲಿ ಮೇಲ್ಜಾತಿ, ಕೆಳ ಜಾತಿಗಳಿದ್ದು, ಇದರ ನಡುವೆ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಅಸಮಾನತೆಗಳು ಇವೆ. ಎಷ್ಟೇ ಹುಡುಕಿದರು ಏಕ ಸಂಸ್ಕೃತಿ ಹೊಂದಿರುವರು ದೊರೆಯುವುದಿಲ್ಲ. ವಿವಿಧ ರೀತಿ ಊಟದ ಶೈಲಿ, ಮಾತು ವಿಭಿನ್ನವಾಗಿದ್ದರು, ಜನತೆ ಒಟ್ಟಿಗೆ ಬದುಕುತಿಲ್ಲವೆ.?. ಕಾನೂನುದೃಷ್ಟಿಯಲ್ಲಿ ಸಮಾನ ಅವಕಾಶಗಳು ಇವೆ ಎಂದು ಪ್ರತಿಯೊಬ್ಬರು ಅರಿತುಕೊಳ್ಳಬೇಕು ಎಂದು ನಾಗಮೋಹನ್‌ದಾಸ್ ಎಚ್ಚರಿಸಿದರು.
ಅಗತ್ಯ ವಿಚಾರಗಳು ಚರ್ಚೆಯಾಗುತ್ತಿಲ್ಲ:
ಕುಟುಂಬ, ಊರು, ರಾಜ್ಯ, ದೇಶವನ್ನು ಅರ್ಥ ಮಾಡಿಕೊಂಡರೆ ಸಂವಿಧಾನ ಅರ್ಥ ಮಾಡಿಕೊಳ್ಳಲು ಸಾಧ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೂರು ವ್ಯವಸ್ಥೆಗಳಿವೆ. ನ್ಯಾಯಾಂಗದ ವ್ಯವಸ್ಥೆಯಲ್ಲಿ ಸುಪ್ರೀಂ, ಹೈಕೋರ್ಟ್, ಜಿಲ್ಲಾ, ತಾಲೂಕು ನ್ಯಾಯಾಲಯಗಳಿವೆ. ಕಾರ್ಯಾಂಗರದಲ್ಲಿ ಸಂಸತ್, ವಿಧಾನಸಭೆ, ಜಿಲ್ಲಾಡಳಿತ, ಜಿ.ಪಂ, ತಾ.ಪಂ ಗ್ರಾಪಂ ಇವೆ. ಇದರಲ್ಲಿ ದೇಶದ ಜನ ಭಾಗಿಯಾಗುತ್ತಿದ್ದು, ಜನತೆಗೆ ಅಗತ್ಯವಾಗಿ ಬೇಕಾಗಿರುವ ವಿಚಾರಗಳು ಚರ್ಚೆಯಾಗುತ್ತಿಲ್ಲ ಎಂದು ನಾಗಮೋಹನ್‌ದಾಸ್ ಅಸಮಾಧಾನವ್ಯಕ್ತಪಡಿಸಿದರು.