ಆನೆಗಳ ಸ್ಥಳಾಂತರಕ್ಕೆ ಸರ್ಕಾರ ಕ್ರಮ ಕೈಗೊಳ್ಳಲಿ

deepak doddaya
ದೀಪಕ್ ದೊಡ್ಡಯ್ಯ
Published on

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ದಿನೇದಿನೆ ಹೆಚ್ಚಾಗುತ್ತಿದೆ. ಆನೆಗಳನ್ನು ಕೆರಳಿಸುವ ಬದಲು ಬೇರೆಡೆಗೆ ಸ್ಥಳಾಂತರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದೀಪಕ್ ದೊಡ್ಡಯ್ಯ ಒತ್ತಾಯಿಸಿದರು.

ಆನೆಗಳ ದಾಳಿಯಿಂದ 6 ಮಂದಿ ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಅವರ ಕುಟುಂಬಕ್ಕೆ ಕನಿಷ್ಠ 15 ಲಕ್ಷ ರೂ. ಪರಿಹಾರ ಕಲ್ಪಿಸಬೇಕು. ಭಾನುವಾರ ರೈತ ಕಿನ್ನಿ ಸಾವು ಮಲೆನಾಡಿಗರಲ್ಲಿ ಹೆಚ್ಚು ಜೀವ ಭಯ ತಂದಿದೆ. ರೈತರು ತೋಟಗಳ ಕಡೆ ಹೋಗಲು ಭಯಪಡುವಂತಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಆನೆ ಕಾರ್ಯಪಡೆಯನ್ನು ರಚಿಸಿ ಅರಣ್ಯ ಸಂರಕ್ಷಣಾಧಿಕಾರಿ ದರ್ಜೆಯ ಅಧಿಕಾರಿ ನೇಮಕ ಮಾಡಲಾಗಿತ್ತು. ಇದೀಗ ಅಧಿಕಾರಿಯ ವರ್ಗಾವಣೆಯಾಗಿದ್ದು, ಅವರ ಜಾಗಕ್ಕೆ ಯಾರನ್ನೂ ನಿಯೋಜಿಸಿಲ್ಲ. ಕಾರ್ಯಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 40 ಮಂದಿ ನೌಕರರಿಗೆ 3-4 ತಿಂಗಳಿಂದ ವೇತನ ಬಾಕಿ ಉಳಿಸಿಕೊಂಡಿದೆ ಎಂದು ದೂರಿದರು.
ಊರುಬಗೆ, ಕುಂದೂರು, ಸಬ್ಬೇನಹಳ್ಳಿ ಮತ್ತು ಕಂಚಿನಕಲ್ಲು ದುರ್ಗಗಳಲ್ಲಿ ರೈತರು, ಕೂಲಿ ಕಾರ್ಮಿಕರು ಕಾಡಾನೆಗಳ ಹಾವಳಿಗೆ ಬಲಿಯಾಗಿದ್ದಾರೆ. ಸಕಲೇಶಪುರದ ಸಮೀಪದ ಆಲೂರಿನಲ್ಲಿ ಶಾರ್ಪ್ ಶೂಟರ್ ವೆಂಕಟೇಶ್ ಪ್ರಾಣ ಕಳೆದುಕೊಂಡಿದ್ದಾರೆ. ರೈತ ಕಿನ್ನನ ಸಾವು ಆದ ಕೂಡಲೇ ತರಾತುರಿಯಲ್ಲಿ ಶವ ಪರೀಕ್ಷೆ ಮಾಡಿಸಿ ಅಂತ್ಯಕ್ರಿಯೆ ಮಾಡಿದ್ದಾರೆ. ಕನಿಷ್ಠ ಸಂಬಂಧಿಕರಿಗೆ ಅಂತಿಮ ದರ್ಶನಕ್ಕೂ ಅವಕಾಶ ನೀಡಿಲ್ಲ ಎಂದು ಆರೋಪಿಸಿದರು.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಫಾರ್ಮ್ 53ರ ಅಡಿಯಲ್ಲಿ ಅಕ್ರಮ ನಡೆದಿದೆ. ಇದರ ಸತ್ಯಾಸತ್ಯತೆ ಅರಿಯಲು 15 ತಹಸೀಲ್ದಾರ್‌ಗಳ ತನಿಖಾ ತಂಡ ರಚನೆ ಮಾಡಲಾಗಿದೆ. ಆದರೆ ಆ ನೆಪದಲ್ಲಿ ಕಾನೂನಾತ್ಮಕವಾಗಿ ಸಾಗುವಳಿ ಚೀಟಿ ಪಡೆದವರಿಗೆ ಯಾವುದೇ ರೀತಿಯ ಅನ್ಯಾಯ ಆಗಬಾರದು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net