ಮೇಕೆದಾಟು ಯೋಜನೆ ಜಾರಿಗೆ ರಾಜ್ಯ ಸರ್ಕಾರ ರಾಜಕೀಯ ಇಚ್ಛಾಶಕ್ತಿ ತೋರಿಸಲಿ; ಬೊಮ್ಮಾಯಿ

CM Basavaraj Bommai
Published on

ಹಾವೇರಿ: ಮೇಕೆದಾಟು ಯೋಜನೆ ಜಾರಿಗೆ ಕಾಂಗ್ರೆಸ್​ ನಾಯಕರು ಪಾದಯಾತ್ರೆ ಮಾಡಿದ್ದರು. ಈಗ ಅವರ ಮಿತ್ತ ಪಕ್ಷ ಡಿಎಂಕೆ ತಮಿಳುನಾಡಿನಲ್ಲಿ ಅಧಿಕಾರದಲ್ಲಿದೆ. ಅವರ ಜೊತೆಗೆ ಐದು ನಿಮಿಷ ಮಾತನಾಡಿದರೆ ಸಮಸ್ಯೆ ಬಗೆ ಹರಿಯುತ್ತದೆ. ಅಂತಹ ರಾಜಕೀಯ ಇಚ್ಛಾಶಕ್ತಿಯನ್ನು ರಾಜ್ಯ ಕಾಂಗ್ರೆಸ್​ ನಾಯಕರು ತೋರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳಸಾ ಬಂಡೂರಿ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಈಗಾಗಲೇ ಡಿಪಿಆರ್​ಗೆ ಒಪ್ಪಿಗೆ ಕೊಟ್ಟಿದೆ. ಪರಿಸರ ಇಲಾಖೆಯ ಅನುಮತಿ ಅತಿ ಶೀಘ್ರವೇ ಸಿಗಲಿದೆ. ಎತ್ತಿನ ಹೊಳೆ ಯೋಜನೆಗೆ ಕೇಂದ್ರದ ಯಾವುದೇ ಅನುಮತಿ ಅಗತ್ಯವಿಲ್ಲ. ಮೇಕೆದಾಟು ಯೋಜನೆ ಜಾರಿಗೆ ರಾಜ್ಯ ಕಾಂಗ್ರೆಸ್​ ನಾಯಕರು ಪಾದಯಾತ್ರೆ ಮಾಡಿದ್ದರು. ಆಗ ನಾವು ಈ ಪ್ರಕರಣ ಅಂತಾರಾಜ್ಯ ವಿವಾದದಲ್ಲಿ ಕೋರ್ಟ್​ನಲ್ಲಿದೆ ಅಂತ ಹೇಳಿದಾಗ ಕಾಂಗ್ರೆಸ್​ ನಾಯಕರು ತಾವು ಅನುಮತಿ ತರುತ್ತೇವೆ ಎಂದಿದ್ದರು. ಈಗ ಅವರ ಮಿತ್ರ ಪಕ್ಷ ಡಿಎಂಕೆ ತಮಿಳುನಾಡಿನಲ್ಲಿ ಅಧಿಕಾರದಲ್ಲಿದೆ. ಅವರ ಜೊತೆಗೆ ಐದು ನಿಮಿಷ ಮಾತನಾಡಿದರೆ ಸಮಸ್ಯೆ ಬಗೆ ಹರಿಯುತ್ತದೆ. ಅಂತಹ ರಾಜಕೀಯ ಇಚ್ಛಾಶಕ್ತಿಯನ್ನು ಕಾಂಗ್ರೆಸ್​ ನಾಯಕರು ತೋರಿಸಬೇಕು ಎಂದು ಆಗ್ರಹಿಸಿದರು.

ಏ. 10ಕ್ಕೆ ಧರಣಿ...

ರಾಜ್ಯ ಸರ್ಕಾರದ ಬೆಲೆ ಏರಿಕೆ, ಜನ ವಿರೋಧಿ ನೀತಿ ವಿರುದ್ಧ ಏ. 10ರಂದು ಬಿಜೆಪಿ ಹಗಲು ರಾತ್ರಿ ಧರಣಿ ನಡೆಸಲಿದೆ. ಬಿಜೆಪಿ ಸಂಸ್ಥಾಪನೆಯಾಗಿ 45 ವರ್ಷಗಳಾಗಿವೆ. ನಮ್ಮ ಹಿರಿಯರು ಕಟ್ಟಿರುವ ಪಕ್ಷವನ್ನು ಆ ಧ್ಯೇಯ ಉದ್ದೇಶ ಆದರ್ಶಗಳಿಗೆ ಅನುಗುಣವಾಗಿ ಸಮಾಜ ನಿರ್ಮಾಣ ಮಾಡುವ ಸಂಕಲ್ಪ ಮಾಡಿ ನಾವು ಆಚರಣೆ ಮಾಡಿದ್ದೇವೆ. ನಮ್ಮ ಕಾರ್ಯಕರ್ತರಲ್ಲಿ ಹೊಸ ಹುಮ್ಮಸು ಬಂದಿದೆ ಎಂದರು.

ವಕ್ಸ್​ ಕಾಯ್ದೆ ಜಾರಿ ಕುರಿತು ಕೇಳಿದ ಪಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಷ್ಟ್ರದಲ್ಲಿ ರೂಲ್​ ಆಫ್​ ಲಾ ಸ್ಥಾಪನೆ ಆಗಬೇಕು. ವಕ್ಸ್​ ಹೆಸರಿನಲ್ಲಿ ದೇವಸ್ಥಾನ, ಸರ್ಕಾರಿ ಕಚೇರಿಗಳು, ಸಂಸತ್ತು ಭವನ ವಕ್ಸ್​ ಆಸ್ತಿ ಎಂದು ಹೇಳಿದ್ದಾರೆ. ಅವೆಲ್ಲದಕ್ಕೂ ತೆರೆ ಬೀಳಲಿದೆ. ಹಲವಾರು ರೈತರಿಗೆ, ಮುಸ್ಲಿಂ ಸಮುದಾಯದವರಿಗೆ ಅನ್ಯಾಯವಾಗಿದೆ. ಅವರು ಸಿವಿಲ್​ ನ್ಯಾಯಾಲಯಕ್ಕೆ ಹೋಗಲು ಅವಕಾಶವಿದೆ. ಅದಕ್ಕೆ ಕಾನೂನು ಪುನರ್​ ಸ್ಥಾಪನೆಯಾಗಲಿದೆ. ಬರುವ ದಿನಗಳಲ್ಲಿ ಎಲ್ಲರಿಗೂ ನ್ಯಾಯ ಕೊಡಲು ನಿರ್ಣಯವಾಗಿದೆ. ಅದು ಜಾರಿಯಾದಾಗ ಎಲ್ಲರಿಗೂ ಅನುಭವಕ್ಕೆ ಬರುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net