

ಕಾರ್ಗಲ್: ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು. ಸರ್ಕಾರ ಇಂತಹ ಕಾರ್ಯಕ್ರಮಗಳಿಗೆ ಇನ್ನಷ್ಟು ಉತ್ತೇಜನ ನೀಡಬೇಕು ಎಂದು ಜೋಗ-ಕಾರ್ಗಲ್ ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ರಾಜು ಹೇಳಿದರು.
ಲಿಂಗನಮಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಗಲ್ ಕ್ಲಸ್ಟರ್ ವ್ಯಾಪ್ತಿಯ ಪ್ರತಿಭಾ ಕಾರಂಜಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಒಂದು ಕಾಲದಲ್ಲಿ ಸಮೃದ್ಧವಾಗಿದ್ದ ಯೋಜನಾ ಪ್ರದೇಶದ ಲಿಂಗನಮಕ್ಕಿ ಗ್ರಾಮ ಇಂದು ಜನರಿಲ್ಲದೆ ಬಿಕೋ ಎನ್ನುತ್ತಿದೆ. ಮುಚ್ಚುವ ಹಂತದಲ್ಲಿದ್ದ ಲಿಂಗನಮಕ್ಕಿ ಸರ್ಕಾರಿ ಶಾಲೆಗೆ ಮರುಜೀವ ತುಂಬಲಾಗಿದೆ. ‘ನಮ್ಮನೆ ಹೆಣ್ಣು ಮಕ್ಕಳ ವಸತಿ ನಿಲಯ’ವನ್ನು ಸ್ಥಾಪಿಸಿ ಕರೂರು ಮತ್ತು ಭಾರಂಗಿ ಹೋಬಳಿ ವ್ಯಾಪ್ತಿಯ 35 ವಿದ್ಯಾರ್ಥಿನಿಯರಿಗೆ ಉಚಿತವಾಗಿ ವಸತಿ, ವಿದ್ಯಾಭ್ಯಾಸ ಕೊಡಿಸುತ್ತಿರುವ ನಮ್ಮನೆ ಸಂಸ್ಥಾಪಕ ಸಂತೋಷ್ ಲಿಂಗನಮಕ್ಕಿ ಅವರ ಕಾರ್ಯ ಶ್ಲಾಘನೀಯ. ಇವರ ಪ್ರಯತ್ನಕ್ಕೆ ಮುಂದಿನ ಬಜೆಟ್‌ನಲ್ಲಿ ವಿಶೇಷವಾಗಿ ಈ ಶಾಲೆಯ ಅಭಿವೃದ್ಧಿಗೆ ಒಂದು ಲಕ್ಷ ರೂ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಕಾರ್ಗಲ್ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಒಟ್ಟು 12 ಶಾಲೆಯ 350 ಮಕ್ಕಳು ಭಾಗವಹಿಸಿದ್ದರು. ಸಾಂಸ್ಕೃತಿಕ ವಲಯದ 27 ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಅರಳಗೋಡು ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ದಿನೇಶ್, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷೆ ಶಾಂತಾ ಸುಬ್ರಹ್ಮಣ್ಯ, ನಮ್ಮನೆ ಸಂಸ್ಥಾಪಕ ಸಂತೋಷ್ ಲಿಂಗನಮಕ್ಕಿ, ಮುಖ್ಯ ಶಿಕ್ಷಕ ಪರಶುರಾಮ್, ಪ್ರತಿಭಾ ಕಾರಂಜಿ ನೋಡಲ್ ಅಧಿಕಾರಿ ವಿ.ಟಿ.ಸ್ವಾಮಿ, ಸಿಆರ್‌ಪಿ ಸತೀಶ್ ನಾಯಕ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ದಿನೇಶ್, ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ಗವಿಯಪ್ಪ, ಪ್ರಮುಖರಾದ ಬಾಬಣ್ಣ, ಗೌರಿ ಭಟ್, ಸತ್ಯಮ್ಮ, ಶ್ರೀಧರ್ ಇತರರಿದ್ದರು.