

ಬೆಟ್ಟದಪುರ: ರಾಸುಗಳಿಗೆ ಒಕ್ಕೂಟದಿಂದ ಸಿಗುವ ವಿಮೆ ಸೌಲಭ್ಯವನ್ನು ಪ್ರತಿಯೊಬ್ಬರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಮೈಮುಲ್ ಉಪವ್ಯವಸ್ಥಾಪಕ ಡಾ.ಸತೀಶ್ ಹೇಳಿದರು.
ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಮಂಗಳವಾರ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾ ಹಾಲು ಒಕ್ಕೂಟಕ್ಕೆ ಹಾಲು ಸರಬರಾಜು ಮಾಡುವಲ್ಲಿ ಪಿರಿಯಾಪಟ್ಟಣ ತಾಲೂಕು ಪ್ರಥಮ ಸ್ಥಾನದಲ್ಲಿ ಇದೆ. ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ಸಬ್ಸಿಡಿ ದರದಲ್ಲಿ ಸಿಗುವ ಮೇವು ತುಂಡರಿಸುವ ಯಂತ್ರ, ಹಾಲು ಕರೆಯುವ ಯಂತ್ರ, ರಬ್ಬರ್ ಮ್ಯಾಟ್ ಸೇರಿದಂತೆ ಸೌಲಭ್ಯಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದರು.
ಸಭೆಯಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ಉತ್ಪಾದಕರಿಗೆ ಸನ್ಮಾನಿಸಿ ಬಹುಮಾನ ನೀಡಲಾಯಿತು. ಮೈಮುಲ್ ವಿಸ್ತರಣಾಧಿಕಾರಿ ಅವಿನಾಶ್, ಸಂಘದ ಆಡಳಿತಾಧಿಕಾರಿ ಗಿರೀಶ್, ಕಾರ್ಯದರ್ಶಿ ನಂದೀಶ್, ಸಿಬ್ಬಂದಿ ಶಿವಕುಮಾರ್, ಗೋವಿಂದೆಗೌಡ, ಕಿರಣ್ ಇತರರು ಇದ್ದರು.