

ರಾಜ್ಯದಲ್ಲಿ ರೈತರ ಜಮೀನುಗಳ ಪಹಣಿಯಲ್ಲಿ ‘ವಕ್ಛ್ ಜಾಗ’ ಎಂದು ನಮೂದಿಸಿದ ನಂತರ ಉದ್ಭವಿಸಿರುವ ಸಮಸ್ಯೆ ಸದ್ಯಕ್ಕೆ ಬಗೆಹರಿಯುವಂತೆ ಕಾಣುತ್ತಿಲ್ಲ. ತಲೆತಲಾಂತರಗಳಿಂದ ಉಳುಮೆ ಮಾಡುತ್ತ ಬಂದಿರುವ ಜಮೀನುಗಳನ್ನು ಈಗ ದಿಢೀರನೆ ವಕ್ಛ್ ಆಸ್ತಿ ಎಂದು ವರ್ಗೀಕರಿಸಿ ನೋಟಿಸ್ ನೀಡುತ್ತಿರುವುದು ರೈತರನ್ನು ಕೆರಳಿಸಿದೆ, ವ್ಯವಸ್ಥೆಯ ಬಗ್ಗೆ ಭಾರಿ ಆಕ್ರೋಶ ಮೂಡಿಸಿದೆ. ರೈತರ ಸಿಟ್ಟನ್ನು ಶಮನಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಸಚಿವ ಸಂಪುಟದ ಅನೇಕ ಹಿರಿಯರು ಇನ್ನಿಲ್ಲದ ಪ್ರಯತ್ನ ನಡೆಸಿದರೂ ಪ್ರಯೋಜನವಾಗಿಲ್ಲ.
ಈ ಮಧ್ಯೆ ಹೋರಾಟದ ಹಾದಿ ತುಳಿಯಲು ಬಿಜೆಪಿ ನಿರ್ಧರಿಸಿದ್ದು, ಸೋಮವಾರದಿಂದ ಜನಾಂದೋಲನ ಪ್ರಾರಂಭಿಸಲಿದೆ. ‘ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ರೈತರ ಹಾಗೂ ದೇವಸ್ಥಾನದ ಜಮೀನುಗಳನ್ನು ಕಾಂಗ್ರೆಸ್ ವಕ್ಛ್ ಆಸ್ತಿಯಾಗಿ ಪರಿವರ್ತಿಸುತ್ತಿದೆ. ಇದರ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ವಕ್ಛ್ ವಿಚಾರದಲ್ಲಿ ನೋಟಿಸ್ ಹಿಂಪಡೆಯುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಅದರಿಂದ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯುವುದಿಲ್ಲ ಎಂಬುದು ನಿಶ್ಚಿತ.
ಪಹಣಿಯಲ್ಲಿ ನಮೂದಾಗಿರುವ ‘ವಕ್ಛ್ ಆಸ್ತಿ’ ಎಂಬ ಪದವನ್ನು ತೆಗೆದರೆ ಮಾತ್ರ ಸ್ವಲ್ಪಮಟ್ಟಿಗೆ ಸಮಸ್ಯೆಯನ್ನು ಶಮನಗೊಳಿಸಬಹುದೇನೋ. ಆದರೆ, ಹೀಗೆ ಇದ್ದಕ್ಕಿದ್ದಂತೆ ರೈತರ ಜಮೀನುಗಳ ಪಹಣಿಯಲ್ಲಿ ‘ವಕ್ಛ್ ಆಸ್ತಿ’ ಎಂದು ನಮೂದು ಆದದ್ದಾದರೂ ಹೇಗೆ, ಈ ಬೇಜವಾಬ್ದಾರಿಗೆ ಹೊಣೆ ಯಾರು, ಇಂಥ ಗಂಭೀರ ಲೋಪವಾದರೂ ಅಧಿಕಾರಿಗಳು ಸುಮ್ಮನಿದ್ದದ್ದು ಏಕೆ ಎಂಬ ಪ್ರಶ್ನೆಗಳಿಗೆ ಈವರೆಗೆ ಸರ್ಕಾರದಿಂದ ಸಮರ್ಪಕ ಉತ್ತರ ಸಿಕ್ಕಿಲ್ಲ. ನೋಟಿಸ್ಗಳ ಹೊರತಾಗಿಯೂ ಹಲವರ ಆರ್.ಟಿ.ಸಿ ಪಹಣಿಗಳಲ್ಲಿಯೂ ಯಾವುದೇ ಸಮರ್ಪಕ ಕಾನೂನುಗಳನ್ನು ಪಾಲಿಸದೆ ವಕ್ಛ್ ಆಸ್ತಿಗಳೆಂದು ತಿದ್ದುಪಡಿ ಮಾಡಲಾಗಿದ್ದು, ಇದರಿಂದ ರೈತರು ತೀವ್ರವಾಗಿ ಆತಂಕಿತರಾಗಿದ್ದಾರೆ. ಅಲ್ಲದೆ, ಈ ಪ್ರಕರಣ ಸೂಕ್ಷ್ಮವಾಗಿದ್ದು, ವಿವೇಚನೆಯಿಂದ ನಿಭಾಯಿಸಬೇಕಿದೆ.
ಸರ್ಕಾರದಲ್ಲಿ ಇರುವವರು ಪ್ರತಿಪಕ್ಷದವರ ಮೇಲೆ, ಪ್ರತಿಪಕ್ಷ ನಾಯಕರು ಸರ್ಕಾರದ ಮೇಲೆ ಆರೋಪ-ಪ್ರತ್ಯಾರೋಪ ಮಾಡುತ್ತ ಕಾಲಹರಣ ಮಾಡುವ ಬದಲು, ಸರ್ಕಾರ ಮತ್ತು ಪ್ರತಿಪಕ್ಷ ನಾಯಕರ ನಿಯೋಗಗಳು ರೈತರ ಬಳಿ ತೆರಳಿ ಅವರ ಸಮಸ್ಯೆಯನ್ನು ಅರಿಯಬೇಕು. ಸ್ಥಳೀಯವಾಗಿ ತಪು್ಪ ಎಸಗಿರುವ ಅಧಿಕಾರಿಗಳನ್ನು ಪ್ರಶ್ನಿಸಬೇಕು. ಅದನ್ನು ಬಿಟ್ಟು, ಎಲ್ಲವನ್ನೂ ರಾಜಕೀಯ ಲಾಭದ ದೃಷ್ಟಿಯಿಂದಲೇ ಮಾಡುತ್ತ ಹೋದರೆ ರೈತರ ಮತ್ತು ಜನಸಾಮಾನ್ಯರ ಸಮಸ್ಯೆ ಬಗೆಹರಿಯುವುದಿಲ್ಲ. ‘ನಮ್ಮದು ರೈತಪರ ಪಕ್ಷ’ ಎಂದು ಚುನಾವಣೆ ಸಂದರ್ಭಗಳಲ್ಲಿ ಅಬ್ಬರದ ಭಾಷಣ ಮಾಡುವ ನಾಯಕರು ಈಗ ಅವರಿಗೆ ನ್ಯಾಯ ದೊರಕಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಮತ್ತು ಮುಖ್ಯವಾಗಿ ರೈತರ ಪಹಣಿಯಲ್ಲಿನ ‘ವಕ್ಛ್ ಆಸ್ತಿ’ಯನ್ನು ತೆಗೆದುಹಾಕಿ, ಜಮೀನಿನ ದಾಖಲೆಗಳನ್ನು ಸರಿಪಡಿಸಬೇಕು. ಈ ನಿಟ್ಟಿನಲ್ಲಿ ಸಚಿವರು, ಶಾಸಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಪ್ರಯತ್ನ ಮಾಡುವುದು ಒಳಿತು.