ದೂರುಗಳು ಇಲ್ಲದಂತೆ ವೈದ್ಯರು ಕರ್ತವ್ಯ ನಿರ್ವಹಿಸಲಿ

03 KRN-2
ಕೆ.ಆರ್.ನಗರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಡಿ.ರವಿಶಂಕರ್ ಮಾತನಾಡಿದರು. ಡಾ.ಡಿ.ನಟರಾಜು, ಡಾ.ನವೀನ್‌ಕುಮಾರ್, ಡಾ.ಅಶೋಕ್, ಡಾ.ದರ್ಶನ್, ಎಚ್.ಎಚ್.ನಾಗೇಂದ್ರ ಇತರರು ಇದ್ದರು.
Published on

ಕೆ.ಆರ್.ನಗರ: ಎಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರ ಉತ್ತಮವಾಗಿರುತ್ತದೆಯೋ ಆ ದೇಶ ಪ್ರಗತಿ ಸಾಧಿಸುವುದರ ಜತೆಗೆ ಆರ್ಥಿಕವಾಗಿಯೂ ಮುಂದುವರಿಯುತ್ತದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.


ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ರೋಗಿಗಳು ವೈದ್ಯರಲ್ಲಿ ದೇವರನ್ನು ಕಾಣುತ್ತಾರೆ. ಅವರ ನಂಬಿಕೆಗೆ ಧಕ್ಕೆ ಬಾರದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ವೈದ್ಯರಿಗೆ ಸಲಹೆ ನೀಡಿದರು.


ಕ್ಷೇತ್ರದ ಜನತೆಗೆ ಉತ್ತಮ ಆರೋಗ್ಯ ಸೇವೆ ನೀಡುವ ಸಲುವಾಗಿ ನಾನು ಸಹಕಾರ ನೀಡಲಿದ್ದು, ಯಾವುದೇ ದೂರುಗಳು ಬಾರದಂತೆ ವೈದ್ಯರು ಕರ್ತವ್ಯ ನಿರ್ವಹಿಸಬೇಕು ಎಂದರು.


ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವುದರ ಜತೆಗೆ ಮಿರ್ಲೆ ಮತ್ತು ಭೇರ್ಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಉನ್ನತ ಸೌಲಭ್ಯ ಕಲ್ಪಿಸಲಾಗುತ್ತದೆ. ಜತೆಗೆ ಪಟ್ಟಣ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಉನ್ನತೀಕರಿಸಿ ಅದರೊಂದಿಗೆ ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚುವರಿ ಡಯಾಲಿಸಿಸ್ ಯಂತ್ರಗಳನ್ನು ನೀಡಲಾಗುತ್ತದೆ. ಸಾಲಿಗ್ರಾಮದಲ್ಲಿಯೂ ಡಯಾಲಿಸಿಸ್ ಕೇಂದ್ರ ಆರಂಭಿಸಲಾಗುತ್ತದೆ ಎಂದು ಹೇಳಿದರು.


ಆರೋಗ್ಯ ಇಲಾಖೆ ವತಿಯಿಂದ ನಡೆಸುವ 34 ಕಾರ್ಯಕ್ರಮಗಳ ಪೂರ್ಣ ಮಾಹಿತಿಯನ್ನು ಸಾರ್ವಜನಿಕರು ಮತ್ತು ರೋಗಿಗಳಿಗೆ ತಿಳಿಸಿ ಕಾರ್ಯಕ್ರಮ ಯಶಸ್ಸಿಗೆ ಕೆಲಸ ಮಾಡಬೇಕು ಎಂದು ಸೂಚಿಸಿದರು.


ಪಟ್ಟಣದ ಆಸ್ಪತ್ರೆಗಳಿಗೆ ಬರುವ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗಳಿಗೆ ಕಳುಹಿಸುವಾಗ ಅಂಬುಲೆನ್ಸ್ ಸಿಬ್ಬಂದಿ ಹಣದಾಸೆಯಿಂದ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡುತ್ತಾರೆಂಬ ದೂರುಗಳು ಬಂದಿದ್ದು, ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.


ವೈದ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಹೆರಿಗೆ ಸಮಯದಲ್ಲಿ ತಾಯಿ ಮತ್ತು ಶಿಶುವಿನ ಮರಣದ ಪ್ರಮಾಣವನ್ನು ಕಡಿಮೆ ಮಾಡಲು ಒತ್ತು ನೀಡಬೇಕು ಎಂದು ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಿ.ನಟರಾಜು, ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ಅಶೋಕ್, ಡಾ.ನಟರಾಜ್, ಎಚ್.ಎಚ್.ನಾಗೇಂದ್ರ, ಡಾ.ನವೀನ್‌ಕುಮಾರ್, ಡಾ.ದರ್ಶನ್, ಡಾ.ದಿವ್ಯತಾ, ಡಾ.ಹೇಮಾ, ಡಾ.ನಿಸರ್ಗ, ಹಿರಿಯ ಆರೋಗ್ಯ ನಿರೀಕ್ಷಕ ಕೆ.ವಿ.ರಮೇಶ್, ಮಹೇಶ್, ಸಿ.ಎಂ.ರೇಖಾ, ಫಾರ್ಮಸಿ ಅಧಿಕಾರಿ ಆನಂದ್ ಕಿತ್ತೂರು, ಮಹೇಶ್, ಎಸ್.ಕುಮಾರ್, ಪ್ರಕಾಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net