ಶಿಕ್ಷಣ ಇಲಾಖೆ ಜತೆಗೆ ಸಮುದಾಯ ಕೈಜೋಡಿಸಲಿ

annual day
ಸೊರಬದ ಕಾನಕೇರಿ ಬಡಾವಣೆಯ ಸರ್ಕಾರಿ ಉರ್ದು ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಬಿಇಒ ಪುಷ್ಪಾ ಉದ್ಘಾಟಿಸಿದರು. ಅನೀಶ್, ಶಫೀ ಅಹ್ಮದ್, ಸನಾವುಲ್ಲಾ, ಜಯಲಕ್ಷ್ಮೀ, ಪ್ರಕಾಶ್ ಇತರರಿದ್ದರು.
Published on

ಸೊರಬ: ಶಿಕ್ಷಣ ಕಲಿಕೆಗೆ ಭಾಷೆ ಮುಖ್ಯವಲ್ಲ. ಭಾಷೆಗಳನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ ಎಲ್ಲವನ್ನೂ ಕಲಿಕೆಗೆ ಆದ್ಯತೆ ನೀಡಬೇಕು ಎಂದು ಬಿಇಒ ಪುಷ್ಪಾ ತಿಳಿಸಿದರು.

ಪಟ್ಟಣದಲ್ಲಿ ಮಂಗಳವಾರ ಕಾನಕೇರಿ ಬಡಾವಣೆಯ ಸರ್ಕಾರಿ ಉರ್ದು ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಪಾಠಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಾಲೆಗಳಲ್ಲಿ ಮಕ್ಕಳಿಗೆ ಕಲೆ, ಸಾಹಿತ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಜಾತಿ, ಮತಗಳ ಆಧಾರದ ಮೇಲೆ ಆದ್ಯತೆ ನೀಡಬಾರದು. ಪ್ರತಿ ಮಗು ಕೂಡ ಸಮಾಜದ ಆಸ್ತಿ ಎನ್ನುವ ನಿಟ್ಟಿನಲ್ಲಿ ಶಿಕ್ಷಣ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಪ್ರಾಥಮಿಕ ಹಂತದಲ್ಲಿಯೇ ಉರ್ದು ಶಾಲೆಗಳಲ್ಲಿ ಆದ್ಯತೆ ಮೇರೆಗೆ ಕನ್ನಡ ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ತಿಳಿಸಿದರು.

ವಿವಿಧ ಕ್ಷೇತ್ರಗಳಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಉರ್ದು ಶಾಲೆಯ ಮಕ್ಕಳನ್ನು ಪ್ರೇರಣೆಯಾಗಿ ಇಟ್ಟುಕೊಂಡು ಮಕ್ಕಳಲ್ಲಿ ಉತ್ಸಾಹ ತುಂಬಬೇಕು. ಮಕ್ಕಳು ಶಾಲೆಯಿಂದ ಹೊರಗೆ ಉಳಿಯದಂತೆ ನೋಡಿಕೊಳ್ಳುವುದು ಶಿಕ್ಷಣ ಇಲಾಖೆಯ ಜವಾಬ್ದಾರಿ. ಇದರಲ್ಲಿ ಪಾಲಕರ ಹೊಣೆಯೂ ಮುಖ್ಯವಾಗುತ್ತದೆ. ಪಾಲಕರ ಜತೆಗೆ ಸಮುದಾಯದ ಸಹಕಾರ ಇಲಾಖೆಗೆ ದೊರೆತಾಗ ಶಿಕ್ಷಣ ಕ್ಷೇತ್ರದಲ್ಲಿ ಪರಿಣಾಮಕಾರಿ ಬದಲಾವಣೆ ಸಾಧ್ಯ ಎಂದರು.

ಸಮಾಜ ಸೇವಕ ರಾಜು ಹಿರಿಯಾವಲಿ ಮಾತನಾಡಿ, ಗುಣಮಟ್ಟದ ಶಿಕ್ಷಣ ಪಡೆಯುವುದು ಸಮಾಜದಲ್ಲಿ ಪ್ರತಿಯೊಬ್ಬರ ಹಕ್ಕು. ಕಲಿಕೆಗೆ ಯಾವುದೇ ಜಾತಿ, ಧರ್ಮ ಅಡ್ಡಿ ಬರಬಾರದು. ಈ ದಿಸೆಯಲ್ಲಿ ಪಟ್ಟಣದ ಉರ್ದು ಶಾಲೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಎಸ್‌ಡಿಎಂಸಿ ಅಧ್ಯಕ್ಷ ಅನೀಶ್ ಮಾತನಾಡಿ, ಸರ್ಕಾರ ಉರ್ದು ಶಾಲೆಗಳ ಸ್ಥಾಪನೆ ಮೂಲಕ ಮುಸ್ಲಿಂ ಸಮುದಾಯದ ಮಕ್ಕಳನ್ನೂ ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದೆ. ಶಾಲೆಯಲ್ಲಿ ಉತ್ತಮ ವಾತಾವರಣ ನಿರ್ಮಿಸಿ, ಅಗತ್ಯ ಮೂಲ ಸೌಕರ್ಯ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.

ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಮುಖ್ಯ ಶಿಕ್ಷಕ ಶಫೀ ಅಹ್ಮದ್, ಜಿಲ್ಲಾ ಉರ್ದು ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸನಾವುಲ್ಲಾ, ಗೌರವಾಧ್ಯಕ್ಷ ಶಂಸೀರ್ ಖಾನ್, ಮನ್ಸೂರ್, ಪುರಸಭಾ ಸದಸ್ಯರಾದ ಆಫ್ರೀನಾ ಬಾನು, ಜಯಲಕ್ಷ್ಮೀ, ಶಿಕ್ಷಣ ಇಲಾಖೆಯ ಪ್ರಕಾಶ್, ಶಿವಕುಮಾರ್, ಗಣಪತಿ, ಸತ್ಯನಾರಾಯಣ, ವಿಜಯ್‌ಕುಮಾರ್, ಸಣ್ಣಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net