

ತೀರ್ಥಹಳ್ಳಿ: ಪಟ್ಟಣದ ಶ್ರೀರಾಮೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿ ಶನಿವಾರ ನಡೆದ ತೆಪ್ಪೋತ್ಸವ ಸಮಿತಿ ಸಭೆಯಲ್ಲಿ ವಿನಾಕಾರಣ ನನ್ನ ಹೆಸರನ್ನು ಎಳೆದು ತಂದಿರುವ ಸಮಿತಿ ಸಂಚಾಲಕರಾಗಿದ್ದ ಸೊಪ್ಪುಗುಡ್ಡೆ ರಾಘವೇಂದ್ರ ಹೇಳಿಕೆ ಖಂಡನೀಯ ಎಂದು ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಹೇಳಿದರು.
ನಾನು ಶಾಸಕನಾಗಿದ್ದ ಅವಧಿಯಲ್ಲಿ ನಡೆದಿದ್ದ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಹಣಕಾಸಿನ ವ್ಯವಹಾರ ಪೂರ್ಣವಾಗಿ ಅಂದಿನ ತಹಸೀಲ್ದಾರ್ ಮತ್ತು ಸಮಿತಿ ಸಂಚಾಲಕರಾಗಿದ್ದ ರಾಘವೇಂದ್ರ ಅವರೇ ನಿರ್ವಹಿಸಿದ್ದಾರೆ. ವೈಯಕ್ತಿಕವಾಗಿ ನಾನು ಒಂದು ಲಕ್ಷ ರೂ. ದೇಣಿಗೆಯನ್ನೂ ನೀಡಿದ್ದೇನೆ. ಜತೆಗೆ ದಾನಿಗಳಿಂದ ಹಣ ಕೊಡಿಸಿದ್ದೇನೆಯೇ ಹೊರತು ಒಂದು ರೂಪಾಯಿಯನ್ನೂ ನಾನು ಸಂಗ್ರಹ ಮಾಡಿರಲಿಲ್ಲ. ಈ ವಿಚಾರವಾಗಿ ನನ್ನ ಹೆಸರು ತಂದಿರುವುದು ರಾಘವೇಂದ್ರ ಅವರ ಬೇಜವಾಬ್ದಾರಿ ಹೇಳಿಕೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಜೀರ್ಣೋದ್ಧಾರ ಸಮಿತಿಯ ಹಣಕಾಸು ವಿವರ ನೀಡುವ ಮುನ್ನ ಈ ವಿಚಾರವನ್ನು ಸೌಜನ್ಯಕ್ಕೂ ನನ್ನ ಗಮನಕ್ಕೆ ತಂದಿರಲಿಲ್ಲ. ಹೀಗಾಗಿ ದೇವರ ಮುಖವಾಡಕ್ಕಾಗಿ ದಾನಿಯೊಬ್ಬರು ನೀಡಿದ್ದ ದೇಣಿಗೆಯನ್ನು ಜೀರ್ಣೋದ್ಧಾರ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ ಎಂಬ ಆರೋಪದ ಮೇಲೆ ಮುಜರಾಯಿ ಇಲಾಖೆಯಿಂದ ನೋಟಿಸ್ ಬಂದಿರುವುದನ್ನು ನನ್ನ ಗಮನಕ್ಕೆ ತಾರದ ಕಾರಣ ಉತ್ತರ ನೀಡಬೇಕಾದ ಹೊಣೆ ಆ ಸಮಿತಿಗೆ ಸೇರಿದೆ ಎಂದು ಸ್ಪಷ್ಟಪಡಿಸಿದರು.
ರಾಮೇಶ್ವರ ದೇವಸ್ಥಾನ ಕಳಾಹೀನವಾಗಿದೆ ಎಂದು ಧಾರ್ಮಿಕ ಕ್ಷೇತ್ರದ ಪ್ರಮುಖರು ಮತ್ತು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿದ್ದರೂ ಶಾಸಕರಾದ ಆರಗ ಜ್ಞಾನೇಂದ್ರ ಆ ಬಗ್ಗೆ ಕಾಳಜಿಯನ್ನೇ ವಹಿಸಿರಲಿಲ್ಲ. ನಾನೇ ಆಸಕ್ತಿ ವಹಿಸಿ ಸೊಪ್ಪುಗುಡ್ಡೆ ರಾಘವೇಂದ್ರ ಬಿಜೆಪಿ ಪಕ್ಷಕ್ಕೆ ಸೇರಿದವರಾಗಿದ್ದರೂ ಪಕ್ಷಭೇದ ಮಾಡದೆ ಅವರನ್ನು ಸಂಚಾಲಕರನ್ನಾಗಿ ನೇಮಕ ಮಾಡಿದ್ದೇನೆ. ಎಷ್ಟೇ ಪ್ರಾಮಾಣಿಕ ವ್ಯಕ್ತಿಯಾದರೂ ಬೇರೆಯವರನ್ನು ಆದರಿಸುವ ಇಂತಹ ಒಂದು ಉದಾಹರಣೆ ಬಿಜೆಪಿಯವರಿಗೆ ಇದೆಯೇ ಎಂದು ಪ್ರಶ್ನಿಸಿದರು.
ಜೀರ್ಣೋದ್ಧಾರದ ಕೆಲಸ ಸಮರ್ಪಕವಾಗಿಯೇ ನಡೆದಿದೆ. ನಾನು ಅಧಿಕಾರದಲ್ಲಿ ಇಲ್ಲ ಎಂಬ ಕಾರಣಕ್ಕೆ ಈವರೆಗೆ ನನ್ನನ್ನು ಯಾವ ವಿಚಾರಕ್ಕೂ ಕರೆಯದೆ ಸಮಿತಿಯವರೇ ನಿರ್ವಹಣೆ ಮಾಡಿದ್ದಾರೆ. ಅಧಿಕಾರದಲ್ಲಿರುವ ಶಾಸಕರಿಗೇ ಈ ಬಗ್ಗೆ ಸಮಜಾಯಿಷಿ ನೀಡಲಿ. ಆದರೆ ನನ್ನ ಪಾತ್ರದ ಬಗ್ಗೆ ಸಮಿತಿಯವರು ಸಾರ್ವಜನಿಕವಾಗಿ ವಿಚಾರ ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.
ಅನಾದಿಕಾಲದಿಂದ ಆಚರಣೆಯಲ್ಲಿರುವ ಧಾರ್ಮಿಕ ಕಾರ್ಯಗಳು ಯಥಾವತ್ತಾಗಿ ನಡೆಯಲು ನಮ್ಮ ಸಂಪೂರ್ಣ ಬೆಂಬಲವಿದೆ. ಇದರಲ್ಲಿ ರಾಜಕೀಯ ತರುವ ಬಿಜೆಪಿಯವರ ತಂತ್ರಗಾರಿಕೆಗೆ ಮಾತ್ರ ವಿರೋಧವಿದೆ. ತಾಲೂಕಿನ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಿಗೆ ಮಹತ್ತರ ಕೊಡುಗೆ ನೀಡಿದ ಮಹನೀಯರ ಮೇಲೆ ರಾಜಕೀಯ ಕಾರಣಕ್ಕೆ ಒಬ್ಬರನ್ನೂ ಬಿಡದಂತೆ ಕೇಸು ದಾಖಲಿಸಿರುವ ಆರಗ ಜ್ಞಾನೇಂದ್ರ, ತಮ್ಮ ಪಕ್ಷದವರ ವಿಚಾರದಲ್ಲಿ ರಾಜಿ ಸಂಧಾನದ ಬಗ್ಗೆ ಮಾತನಾಡುತ್ತಾರೆ ಎಂದು ಹರಿಹಾಯ್ದರು.
ಕಾಂಗ್ರೆಸ್ ಘಟಕದ ತಾಲೂಕು ಅಧ್ಯಕ್ಷ ಕೆಸ್ತೂರು ಮಂಜುನಾಥ್, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಅಮರನಾಥ ಶೆಟ್ಟಿ, ಪಪಂ ಅಧ್ಯಕ್ಷ ರಹಮತ್‌ಉಲ್ಲಾ ಅಸಾದಿ, ಉಪಾಧ್ಯಕ್ಷೆ ಗೀತಾ ರಮೇಶ್, ಸದಸ್ಯರಾದ ಬಿ.ಗಣಪತಿ, ರತ್ನಾಕರ ಶೆಟ್ಟಿ ಹಾಗೂ ವಿಲಿಯಂ ಮಾರ್ಟಿಸ್ ಇದ್ದರು.