

ಬೇಲೂರು: ಕಳೆದ ಸಾಲಿನಲ್ಲಿ ತಾಲೂಕಿನ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಜಿಲ್ಲಾ, ರಾಜ್ಯ ರಾಷ್ಟ್ರಮಟ್ಟದವರೆಗೂ ತೆರಳಿ ಕೀರ್ತಿ ತಂದಿದ್ದರು. ಅದೇ ರೀತಿ ಬಾರಿಯೂ ರಾಷ್ಟ್ರ ಮಟ್ಟಕ್ಕೆ ತೆರಳುವಂತಾಗಬೇಕು ಎಂದು ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಶಿವಮರಿಯಪ್ಪ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ದಿವ್ಯ ವಿದ್ಯಾಸಂಸ್ಥೆ ಸಹಯೋಗದಲ್ಲಿ ಪಟ್ಟಣದ ಜೂನಿಯರ್ ಕಾಲೇಜ್ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಬೇಲೂರು ಕಸಬಾ ಬಿ, ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಮ್ಮಿಯಾಗಿ ದೈಹಿಕ ಶಿಕ್ಷಕರ ನೇಮಕವಾಗುತ್ತಿಲ್ಲ. ಆದರೂ ಇರುವ ಶಿಕ್ಷಕರೇ ಮಕ್ಕಳಿಗೆ ತರಬೇತಿ ನೀಡಿ ಕರೆ ತರಲಾಗಿದೆ. ಮಕ್ಕಳು ತಮ್ಮಲ್ಲಿ ಅಡಗಿರುವ ಕ್ರೀಡಾ ಪ್ರತಿಭೆ ಪ್ರದರ್ಶಿಸಲು ಇದೊಂದು ಸೂಕ್ತ ವೇದಿಕೆ. ಇಂತಹ ವೇದಿಕೆ ಬಳಸಿಕೊಂಡು ಕೀರ್ತಿ ಗಳಿಸಬೇಕು ಎಂದರು.
ದಿವ್ಯ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಗೌಡೇಗೌಡ ಮಾತನಾಡಿ, ಕ್ರೀಡಾಕೂಟದಲ್ಲಿ ತೀರ್ಪುಗಾರರ ತೀರ್ಪು ಮಕ್ಕಳಿಗೆ ಸ್ಫೂರ್ತಿಯಾಗಬೇಕು. ಮಕ್ಕಳೂ ಕ್ರೀಡಾ ಮನೋಭಾವದೊಂದಿಗೆ ಉತ್ತಮ ಸಾಧನೆಗೆ ಮುಂದಾಗಬೇಕು ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷೆ ವೈ.ಆರ್.ಭಾರತೀಗೌಡ, ದಿವ್ಯ ವಿದ್ಯಾ ಸಂಸ್ಥೆ ನಿರ್ದೇಶಕ ನಾಗರಾಜ್, ದೈಹಿಕ ಶಿಕ್ಷಣ ಸಂಯೋಜಕ ಜಗದೀಶ್, ಇಸಿಒ ಶಿವಪ್ಪ, ಕುಮಾರ್, ಸಿಪಿಇಒ ಚಂದ್ರೇಗೌಡ, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಭದ್ರೇಗೌಡ, ದೈಹಿಕ ಶಿಕ್ಷಣ ಶಿಕ್ಷಕರಾದ ನಂದೀಶ್, ಲೋಕೇಶ್ ಇತರರಿದ್ದರು.