

ಬೆಂಗಳೂರು: ಜಾತಿ ಜನಗಣತಿ ಸ್ವೀಕಾರ ಮಾಡಲಿಲ್ಲ ಎಂದರೆ ಮಾಡಿಲ್ಲ ಎನ್ನುತ್ತಾರೆ. ಮಾಡಿದರೆ ಯಾಕೆ ಮಾಡುತ್ತೀರಿ ಎಂದು ವ್ಯಾಖ್ಯಾನ ಮಾಡುತ್ತಾರೆ. ಇದು ವಿಚಿತ್ರ ಸಂದರ್ಭ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಗಣತಿ ಸ್ವೀಕಾರ ವಿಳಂಬಕ್ಕೂ ಕಾರಣಗಳಿವೆ. ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ವಿಧಾನ ಮಂಡಲದ ಅಧಿವೇಶನದಲ್ಲಿ ತರಬೇಕೆ ಬೇಡವೆ? ಚರ್ಚೆ ಆಗಬೇಕು. ಅಸೆಂಬ್ಲಿಗೆ ಬೇಕಾಗಿಲ್ಲ ಎಂದು ಸಚಿವ ಸಂಪುಟ ತೀರ್ಮಾನ ಮಾಡಿದರೆ ಮುಗಿತು. ಕೇಂದ್ರ ಜನಗಣತಿ ಕೂಡ ಆಗಲಿ. ಓವರ್ ಲ್ಯಾಪ್ ಆಗಿದ್ದರೆ ಮುಂದೆ ಸರಿಪಡಿಸಿಕೊಳ್ಳಬಹುದು. ಯಾವುದಾದರೂ ಸಮುದಾಯದ ಅಂಕಿ-ಸಂಖ್ಯೆ ಹೆಚ್ಚು ಕಮ್ಮಿ ಆಗಿದ್ದರೆ ಆಮೇಲೆ ಸರಿ ಮಾಡಿಕೊಳ್ಳಬಹುದು. ಯಾವಾಗಲೂ ಕೇಂದ್ರ ಸರ್ಕಾರದ ಜನಗಣತಿಯನ್ನೇ ಎಲ್ಲರೂ ಪರಿಗಣಿಸುತ್ತಾರೆ, ಉಪಯೋಗಿಸುತ್ತಾರೆ. ಹಾಗಾಗಿ ಜಾತಿ ಜನಗಣತಿ ವಿಚಾರ ಸಚಿವ ಸಂಪುಟದ ಮುಂದೆ ಚರ್ಚೆಯಾಗಲಿ ಆಮೇಲೆ ನೋಡೋಣ ಎಂದು ಹೇಳಿದರು.
ಜಾತಿ ಜನಗಣತಿಗೆ ರಾಜ್ಯ ಸರ್ಕಾರ 160 ಕೋಟಿ ರೂ. ಖರ್ಚು ಮಾಡಿದೆ ಅದಕ್ಕೂ ಲೆಕ್ಕ ಕೊಡಬೇಕು. ಮುಂದಿನ ದಿನಗಳಲ್ಲಿ ಸಿಎಜಿ ಕೂಡ ಇದಕ್ಕೆ ಆಕ್ಷೇಪ ಮಾಡಬಹುದು. ಹೀಗಾಗಿ ರಾಜ್ಯದ ಜನಗಣತಿ ಕ್ಯಾಬಿನೆಟ್‌ಗೆ ತರುತ್ತೇವೆ ಎಂದು ತಿಳಿಸಿದರು.
ಅಹಿಂದ ನಾಯಕ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಟಾರ್ಗೆಟ್ ಮಾಡಲಾಗುತ್ತದೆ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತ ಪ್ರಶ್ನೆಗೆ, ಸಿದ್ದರಾಮಯ್ಯಗೆ ಕೆಲವೊಂದು ಮಾಹಿತಿ ಇದ್ದೇ ಹೀಗೆ ಹೇಳಿರಬಹುದು. ಆ ಫ್ಯಾಕ್ಟರ್ ಕೂಡ ಇರಬಹುದು. ಸಿದ್ದರಾಮಯ್ಯ ಹೇಳಿದ್ದರಲ್ಲಿ ತಪ್ಪು ಏನಿದೆ? ಸಮಾಜ ಯಾವ ರೀತಿ ನಡೆದುಕೊಳ್ಳುತ್ತಿದೆ ನೋಡುತ್ತಿದ್ದೇವೆ. ಅದನ್ನು ಗಮನಿಸಿಯೇ ಸಿದ್ದರಾಮಯ್ಯ ಹೇಳಿರಬಹುದು ಪ್ರತಿಕ್ರಿಯಿಸಿದರು.
ರಾಜ್ಯದ ರಾಜಕೀಯ ಸ್ಥಿತಿ-ಗತಿ ಕುರಿತು ಹೈಕಮಾಂಡ್ ಮಾಹಿತಿ ಪಡೆಯುತ್ತಿರುವ ಕುರಿತ ಪ್ರಶ್ನೆಗೆ, ಅಧ್ಯಕ್ಷರಿಗೆ ಎಐಸಿಸಿ ನಾಯಕರಿಗೆ ನೇರ ಸಂಪರ್ಕ ಇರುತ್ತದೆ. ಹೈಕಮಾಂಡ್ ಮಾಹಿತಿ ಕಲೆ ಹಾಕುತ್ತಿರಬಹುದು. ಸರ್ಕಾರ ಯಾವ ರೀತಿ ನಡೆಯುತ್ತಿದೆ ಎಂಬುದರ ಮಾಹಿತಿ ಪಡೆಯುತ್ತಿರುತ್ತದೆ, ಮಾಹಿತಿ ಪಡೆಯುತ್ತಿರಬಹುದು. ಗೃಹ ಸಚಿವನಾಗಿ ನನಗೂ ಸಾಕಷ್ಟು ಮಾಹಿತಿ ಬರುತ್ತದೆ. ರಹಸ್ಯವಾಗಿ ಯಾರೂ ಏನೂ ಮಾಡುತ್ತಿಲ್ಲ. ರಾಜಕೀಯವಾದ ಯಾವುದೇ ಗುಂಪುಗಾರಿಕೆ ಆಗುತ್ತಿಲ್ಲ. ನಾನು ಮಹದೇವಪ್ಪ ಮನೆಗೆ ಹೋಗಿದ್ದೆ. ರಹಸ್ಯವಾದ ಚರ್ಚೆ ಮಾಡುವಂಥದ್ದು ಏನೂ ಇಲ್ಲ.
ನನಗೆ ತಿಳಿದಿರುವ ಹಾಗೆ ಯಾವ ರಹಸ್ಯ ಸಭೆಗಳು ನಡೆದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.