ಪ್ರತಿವರ್ಷ ಬಳ್ಳಿಗಾವಿ ಉತ್ಸವ ನಡೆಯಲಿ

srl (2)
ಬಳ್ಳಿಗಾವಿ ಕೇದಾರೇಶ್ವರ, ಬಸವಣ್ಣನ ಜಾತ್ರೆ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಎಂ.ನವೀನ್‌ಕುಮಾರ, ಮೆಸ್ಕಾಂ ಅಧಿಕಾರಿ ಮಂಜಪ್ಪ ಮತ್ತಿತರರು ಉದ್ಘಾಟಿಸಿದರು.
Published on

ಶಿರಾಳಕೊಪ್ಪ: ಅಕ್ಷರ ಹಾಗೂ ಅನ್ನದಾಸೋಹದ ಕಲ್ಪನೆಯನ್ನು 10ನೇ ಶತಮಾನದಲ್ಲಿಯೇ ಜಗತ್ತಿಗೆ ಪರಿಚಯಿಸಿದ ಬಳ್ಳಿಗಾವಿ ಕೇಂದ್ರದಲ್ಲಿ ಪ್ರತಿವರ್ಷ ಸರ್ಕಾರದಿಂದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ವೈಭವ ಸಾರುವ ಉತ್ಸವ ನಡೆಸಬೇಕು ಎಂದು ಕನ್ನಡ ಸಂಶೊಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಎಂ.ನವೀನ್‌ಕುಮಾರ ಒತ್ತಾಯಿಸಿದರು.

ಬಳ್ಳಿಗಾವಿಯಲ್ಲಿ ಕೇದಾರೇಶ್ವರ ಹಾಗೂ ಬಸವಣ್ಣನ ಜಾತ್ರೆ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 50ಕ್ಕೂ ಹೆಚ್ಚು ದೇವಾಲಯ, 12ಕ್ಕೂ ಹೆಚ್ಚು ಜಿನಾಲಯ, 5ಕ್ಕೂ ಹೆಚ್ಚು ಬೌದ್ಧವಿಹಾರಗಳು ಇದ್ದ ಬಗ್ಗೆ ಶಾಸನಗಳು, ದಾಖಲೆಗಳು ತಿಳಿಸುತ್ತವೆ ಎಂದರು.

ಅನುಭವ ಮಂಟಪದ ಅಧ್ಯಕ್ಷ ಅಲ್ಲಮಪ್ರಭು, ನಾಟ್ಯರಾಣಿ ಶಾಂತಲಾ ಹಾಗೂ ಟಿಬೆಟ್, ಚೀನಾ ದೇಶಗಳಲ್ಲಿ ಪೂಜಿಸಲ್ಪಡುವ 2ನೇ ಬುದ್ಧ ಎಂದು ಖ್ಯಾತರಾಗಿದ್ದ ನಾಗಾರ್ಜುನ ಹುಟ್ಟಿದ ಈ ಗ್ರಾಮವು ಅನಾದಿ ಕಾಲದಿಂದಲೂ ಬನವಾಸಿಯ ರಾಜಧಾನಿಯಾಗಿ ಮೆರೆದ ಗ್ರಾಮ. ಪಟ್ಟಣಗಳ ತವರೂರು ಎಂದು ಖ್ಯಾತಿ ಪಡೆದ ಈ ಊರಿನಲ್ಲಿ ದೇಶ, ವಿದೇಶಗಳ ಜತೆಗೆ ವ್ಯವಹಾರ ನಡೆಸುತ್ತಿದ್ದ ವ್ಯಾಪಾರಿಗಳ ಸಮೂಹವೇ ನೆಲೆಸಿತ್ತು. ಈ ಸಮೂಹ ಆಡಳಿತ ಹಾಗೂ ಧಾರ್ಮಿಕ ವಿಚಾರದಲ್ಲಿ ಹಿಡಿತ ಹೊಂದಿದ್ದ ಬಗ್ಗೆ ದಾಖಲೆಗಳು ತಿಳಿಸುತ್ತವೆ ಎಂದರು. ಹಲವಾರು ವರ್ಷಗಳಿಂದ ಅವಿರತವಾಗಿ ಸೇವೆ ಸಲ್ಲಿಸುತ್ತಿರುವ ಮೆಸ್ಕಾಂ ಅಧಿಕಾರಿ ಮಂಜಪ್ಪ ಹಾಗೂ ಲೈನ್‌ಮನ್ ತಂಡವನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net