ಮಂಗನಕಾಯಿಲೆ ಔಷಧ ಸಂಶೋಧನೆಯಾಗಲಿ

shivanand kugwe
ಶಿವಾನಂದ ಕುಗ್ವೆ
Published on

ಸಾಗರ: ಪಟ್ಟಣಕ್ಕೆ ನ.26ರಂದು ಭೇಟಿ ನೀಡುತ್ತಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೆಎ್ಡಿ ಮತ್ತು ಹಂದಿಗೋಡು ಕಾಯಿಲೆ ಕುರಿತು ಗಂಭೀರವಾಗಿ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಶಿವಾನಂದ ಕುಗ್ವೆ ಒತ್ತಾಯಿಸಿದರು.

ಮಲೆನಾಡಿನ ಜನರಿಗೆ ಶಾಪವಾಗಿರುವ ಮಂಗನಕಾಯಿಲೆ ಮತ್ತು ಹಂದಿಗೋಡು ಕಾಯಿಲೆ ಬಗ್ಗೆ ಯಾವ ಸರ್ಕಾರಗಳೂ ಸೂಕ್ತ ನಿಗಾವಹಿಸಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಮೂರು ವರ್ಷಗಳ ಹಿಂದೆ ಮಂಗನಕಾಯಿಲೆಗೆ ತಾಲೂಕಿನಲ್ಲಿ 23ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಪ್ರತಿವರ್ಷ ಮಂಗನ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಆದರೆ ಈತನಕ ಸೂಕ್ತ ಔಷಧ ಕಂಡುಹಿಡಿದಿಲ್ಲ. ತಮಿಳುನಾಡು, ಕೇರಳ, ಕರ್ನಾಟಕ ರಾಜ್ಯದಲ್ಲಿ ಕಾಣಿಸಿಕೊಳ್ಳುತ್ತಿರುವ ಮಂಗನಕಾಯಿಲೆ ಪ್ರತಿ ವರ್ಷ 400ರಿಂದ 500 ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಸರ್ಕಾರ ತಕ್ಷಣ ಸಂಶೋಧನಾ ಕೇಂದ್ರವನ್ನು ಸಾಗರದಲ್ಲಿ ಸ್ಥಾಪಿಸಬೇಕು. ಇದಕ್ಕೆ ಸಂಬಂಧಪಟ್ಟ ಔಷಧಿಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಮೊದಲೇ ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಒತ್ತಾಯಿಸಿದರು.

ಹಂದಿಗೋಡು ಕಾಯಿಲೆಗೆ ಈತನಕ ಔಷಧ ಕಂಡು ಹಿಡಿದಿಲ್ಲ. ಸುಮಾರು 50 ವರ್ಷದಿಂದ ಈ ಕಾಯಿಲೆ ಮಲೆನಾಡಿನ ದಲಿತ ಕೇರಿಗಳ ಕುಟುಂಬಗಳನ್ನು ಬಾಧಿಸುತ್ತಿದೆ. ಈತನಕ ಅನೇಕ ಸಂಶೋಧನೆ ನಡೆದು ವರದಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸಂತ್ರಸ್ತರು ತೀವ್ರ ಸಂಕಷ್ಟದಲ್ಲಿದ್ದು ಸರ್ಕಾರ ಅವರಿಗೆ ತಿಂಗಳಿಗೆ 5 ಸಾವಿರ ರೂ. ಮಾಸಾಶನ ನೀಡಬೇಕು. ಪುನರ್ವಸತಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಆರೋಗ್ಯ ಸಚಿವರು ಈ ಬಗ್ಗೆ ರಾಜ್ಯಮಟ್ಟದಲ್ಲಿ ವಿಶೇಷ ಸಭೆ ಕರೆದು ಸಮಸ್ಯೆ ಪರಿಹಾರಕ್ಕೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಡಿ.ವಸಂತಕುಮಾರ್ ಮಾತನಾಡಿ, ನಬಾರ್ಡ್‌ನಿಂದ ಪ್ರತಿವರ್ಷ ಸುಮಾರು 6 ಸಾವಿರ ಕೋಟಿ ರೂ. ಹಣ ಬಿಡುಗಡೆಯಾಗುತ್ತಿತ್ತು. ಈಗಿನ ಕೇಂದ್ರ ಸರ್ಕಾರ ಈ ಹಣವನ್ನು ಶೇ.58ರಷ್ಟು ಕಡಿತಗೊಳಿಸಿದೆ. ಗ್ರಾಮೀಣ ರೈತರ ಶ್ರೇಯೋಭಿವೃದ್ಧಿಗೆ ಬಿಡುಗಡೆಯಾಗುತ್ತಿದ್ದ ಈ ಹಣವನ್ನು ಕಡಿತ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಳಿ ರಾಜ್ಯದ ಸಂಸದರು ಪ್ರಶ್ನೆ ಮಾಡಬೇಕು ಎಂದು ಒತ್ತಾಯಿಸಿದರು.

ನಗರಸಭೆ ಮಾಜಿ ಸದಸ್ಯ ಸುಂದರಸಿಂಗ್, ಅರಣ್ಯಮೂಲ ಬುಡಕಟ್ಟು ಒಕ್ಕೂಟದ ರಾಜ್ಯ ಸಂಚಾಲಕ ರಾಮಣ್ಣ ಹಸಲರು, ರೈತ ಮುಖಂಡ ಯು.ಪಿ.ಜೋಸ್ೆ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net