

ಶಿವಮೊಗ್ಗ: ಕೃಷಿ ಕ್ಷೇತ್ರವನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಬೇಕು. ಅದನ್ನು ಕೈಗಾರಿಕೆಯಂತೆ ರೂಪಿಸಬೇಕು. ಕೃಷಿ ಕ್ಷೇತ್ರದಲ್ಲಿ ಇನ್ನಷ್ಟು ಸಂಶೋಧನೆಗಳು ನಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿರುವ ಕೃಷಿ-ತೋಟಗಾರಿಕೆ ಮೇಳದ ಎರಡನೇ ದಿನವಾದ ಶನಿವಾರ ಸಾಧಕ ರೈತರು ಹಾಗೂ ರೈತ ಮಹಿಳೆಯರನ್ನು ಸನ್ಮಾನಿಸಿ ಮಾತನಾಡಿದ ಅವರು, ಪ್ರಸ್ತುತ ಹಲವು ಸಂಶೋಧನೆಗಳನ್ನು ನಡೆಸಿ ರೈತರಿಗೆ ಸಹಕರಿಸುತ್ತಿರುವ ಸಂಶೋಧಕರು, ವಿಜ್ಞಾನಿಗಳು ಹಾಗೂ ತಜ್ಞರ ಸಾಧನೆ ಸ್ಮರಣೀಯ ಎಂದರು.
ರೈತರ ಹಿತದೃಷ್ಟಿಯಿಂದ ಈ ವಿವಿ ಸ್ಥಾಪನೆಯಾಗಿದ್ದು ವಿಶ್ವವಿದ್ಯಾಲಯ ಸ್ಥಾಪನೆಗೆ ಕಾರಣರಾದ ಎಲ್ಲರನ್ನೂ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು. ರೈತರಿಗೆ ವೈಜ್ಞಾನಿಕ ಕೃಷಿ ಬಗ್ಗೆ ಸಂಪೂರ್ಣ ಮಾಹಿತಿಯಿಲ್ಲ. ಎಲೆಚುಕ್ಕಿ, ಕೊಳೆ ರೋಗ ನಿವಾರಣೆಗೆ ಉಪಾಯ ಕಂಡುಹಿಡಿಯಬೇಕಿದೆ. ಈ ಬಗ್ಗೆ ನಾನು ಸರ್ಕಾರದ ಹಂತದಲ್ಲಿ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು.
ಇರುವಕ್ಕಿಯಲ್ಲಿ ರಾಜ್ಯ ಮಟ್ಟದ ಕೃಷಿ ಮೇಳ ಆಯೋಜಿಸಿ ಭವಿಷ್ಯದ ಕೃಷಿಗೆ ಒಳ್ಳೆಯ ಸಂದೇಶ ನೀಡಬೇಕಿದೆ. ಯುವಜನರು ಕೃಷಿಯಲ್ಲಿ ಆಸಕ್ತಿ ತೋರುತ್ತಿದ್ದಾರೆ. ಅವರನ್ನು ನಾವು ಪ್ರೋತ್ಸಾಹಿಸಬೇಕಿದೆ. ನದಿ ಮತ್ತು ನೀರಿನ ಸಂರಕ್ಷಣೆ ಮಾಡುವುದು ಅತಿಮುಖ್ಯ. ನೀರನ್ನು ಶುದ್ಧವಾಗಿಟ್ಟುಕೊಳ್ಳುವ ಸಾಮಾಜಿಕ ಪರಿಜ್ಞಾನ ಬೆಳೆಸಿಕೊಳ್ಳಬೇಕಿದೆ. ನದಿ ಉಳಿಸುವ ನಿಟ್ಟಿನಲ್ಲಿ ಸಮಿತಿ ರಚಿಸಲಾಗುವುದು. ವಿದ್ಯಾರ್ಥಿಗಳಿಗೆ ವಾರದಲ್ಲಿ ಒಂದು ದಿನ ಸಾಮಾನ್ಯ ಜ್ಞಾನ ಕಲಿಕೆ ಆರಂಭಿಸಲಾಗುವುದು. ವ್ಯಕ್ತಿತ್ವ ವಿಕಸನ, ಕೃಷಿಯ ಬಗ್ಗೆಯೂ ತಿಳಿಸಲಾಗುವುದು ಎಂದರು.
ಬಸವ ಕೇಂದ್ರದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ತಾಂತ್ರಿಕ ಕೈಪಿಡಿಗಳು, ಸುಧಾರಿತ ಶೇಂಗಾ, ರಾಗಿ ತಳಿಗಳನ್ನು ಬಿಡುಗಡೆಗೊಳಿಸಲಾಯಿತು. ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್ ಬಾನು, ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಭದ್ರಾ ಕಾಡಾ ಅಧ್ಯಕ್ಷ ಡಾ. ಅಂಶುಮಂತ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಚಂದ್ರಭೂಪಾಲ, ಕುಲಪತಿ ಡಾ. ಆರ್.ಸಿ.ಜಗದೀಶ ಇತರರಿದ್ದರು.