

ಶಿವಮೊಗ್ಗ: ದೇವಸ್ಥಾನಗಳು ಧಾರ್ಮಿಕ ಮಾತ್ರವಲ್ಲದೇ ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಗಳಿಗೂ ತೆರೆದುಕೊಳ್ಳಬೇಕು ಎಂದು ಸ್ವಾಮಿ ವಿವೇಕಾನಂದ ಬಡಾವಣೆಯ ನಾಗಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕ ಶಂ.ಸಂದೇಶ ಉಪಾಧ್ಯ ಹೇಳಿದರು.
ಬ್ರಾಹ್ಮಿನ್ಸ್ ಆರ್ಗನೈಜೇಷನ್ ಆಫ್ ಇಂಡಿಯಾ ಜಿಲ್ಲಾ ಘಟಕ ಹಾಗೂ ಗೋಪಾಳದ ಪೂಜಾರ್ ಅಕಾಡೆಮಿ ಆಫ್ ಮ್ಯೂಸಿಕ್ ಸಹಯೋಗದಲ್ಲಿ ದೇವಾಲಯದಲ್ಲಿ ಏರ್ಪಡಿಸಿದ್ದ ಶ್ರಾವಣ ಸಂಜೆ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇವಸ್ಥಾನಗಳು ಸಮಾಜಕ್ಕೆ ಮಾರ್ಗದರ್ಶನ ನೀಡುವಂತಿರಬೇಕು. ದೇವಸ್ಥಾನಗಳಲ್ಲಿ ಕಲೆ, ಸಾಹಿತ್ಯ, ಸಾಮಾಜಿಕ ವಟುವಟಿಕೆಗಳಿಗೆ ಅವಕಾಶ ನೀಡಬೇಕು. ನಾಗಸುಬ್ರಹ್ಮಣ್ಯ ದೇವಸ್ಥಾನ ಸಮಾಜದ ಎಲ್ಲ ಉತ್ತಮ ಕಾರ್ಯಗಳಿಗೆ ಸದಾ ಪ್ರೋತ್ಸಾಹ ನೀಡುತ್ತದೆ ಎಂದು ತಿಳಿಸಿದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಎಚ್.ರಾಮಲಿಂಗಪ್ಪ, ಬ್ರಾಹ್ಮಿನ್ಸ್ ಆರ್ಗನೈಜೇಷನ್ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಕೆ. ವೆಂಕಟೇಶ್ ರಾವ್, ಪೂಜಾರ್ ಅಕಾಡೆಮಿಯ ಮುಖ್ಯಸ್ಥ ರಾಜೀವ್ ಪೂಜಾರ್ ಮಾತನಾಡಿದರು. ಧಾರ್ಮಿಕ ಚಿಂತಕ ಶಬರೀಶ್ ಕಣ್ಣನ್, ಬಿಒಐ ರಾಜ್ಯ ಘಟಕದ ನಿರ್ದೇಶಕ ಎಚ್.ಎನ್.ಛಾಯಾಪತಿ, ಪ್ರಮುಖರಾದ ಎಸ್.ಡಿ.ಗುರುನಾಥ್, ಎ.ಎಸ್.ಸುಧೀರ್, ಎಸ್.ಎನ್. ಮಂಜುನಾಥ್, ತುಕಾರಾಮ್ ರಂಗಧೋಳ್, ಎಚ್.ಆರ್.ಸಂತೋಷ್ ಕುಮಾರ್ ಮುಂತಾದವರಿದ್ದರು. ರೇಣುಕಾ ಕಾರಂತ್ ಮತ್ತು ಸಂಗಡಿಗರು ಭಕ್ತಿಗೀತೆ, ಭಾವಗೀತೆ, ದೇವರನಾಮಗಳ ಗಾಯನ ಪ್ರಸ್ತುತಪಡಿಸಿದರು.