

ಸಾಗರ: ಪತ್ರಿಕೆಗಳು ಮತ್ತು ಪತ್ರಕರ್ತರು ಸಮಾಜದ ವ್ಯವಸ್ಥೆಗಳನ್ನು ತೆರೆದಿಡುವ ಕೆಲಸ ಮಾಡುತ್ತ ಬಂದಿದ್ದಾರೆ. ಪತ್ರಕರ್ತರು ನಿರ್ಭೀತಿಯಿಂದ ಕಾರ್ಯನಿರ್ವಹಿಸಲು ಅವರಿಗೆ ಸಹಕಾರ ನೀಡಬೇಕಾದುದು ಸಮಾಜದ ಜವಾಬ್ದಾರಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ಅಣಲೆಕೊಪ್ಪದಲ್ಲಿ ಭಾನುವಾರ ಕಾರ್ಯನಿರತ ಪತ್ರಕರ್ತರ ಸಂಘದ ಸಾಗರ ಶಾಖೆಯ ನೂತನ ಕಚೇರಿ, ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೈಜ ಸುದ್ದಿ ಬಿತ್ತರಿಸಿ ಸಮಾಜವನ್ನು ಸರಿದಾರಿಗೆ ತರುವ ಜತೆಗೆ ಜನಪ್ರತಿನಿಧಿಗಳು ತಪ್ಪು ಮಾಡಿದಾಗ ಅದನ್ನು ಬರವಣಿಗೆ ಮೂಲಕ ತೋರಿಸಿ ಸರಿಪಡಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ. ಪತ್ರಕರ್ತರಿಗೆ ಬರೆಯುವ ಹಕ್ಕು ಇದೆ. ನನ್ನ ವಿರುದ್ಧ ಸುದ್ದಿ ಬಂದಾಗಲೂ ನಾನು ಅದನ್ನು ಸ್ವೀಕರಿಸಿ ತಪ್ಪನ್ನು ಸರಿಪಡಿಸಿಕೊಂಡಿದ್ದೇನೆ ಎಂದರು.
ರಾಜ್ಯ ಸರ್ಕಾರ ಪತ್ರಕರ್ತರ ಶ್ರೇಯೋಭಿವೃದ್ಧಿಗೆ ವಿಶೇಷ ಒತ್ತು ನೀಡಿದೆ. ಈಗಾಗಲೇ ಮಾಧ್ಯಮ ಸಂಜೀವಿನಿ ಯೋಜನೆ ಜಾರಿಗೊಳಿಸಿದೆ. ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡಿದೆ. ಸಾಗರದಲ್ಲಿ ಪತ್ರಕರ್ತರ ಸಂಘಕ್ಕೆ ಕಚೇರಿ ನೀಡುವ ಭರವಸೆ ನೀಡಲಾಗಿತ್ತು. ನಗರಸಭೆ ಸಹಯೋಗದೊಂದಿಗೆ ನೂತನ ಕಚೇರಿ ನಿರ್ಮಿಸಿಕೊಡಲಾಗಿದೆ. ಇದರ ಜತೆಗೆ ಪತ್ರಕರ್ತರ ನಿವೇಶನ ಬೇಡಿಕೆಯನ್ನು ಸದ್ಯದಲ್ಲಿಯೇ ಈಡೇರಿಸಲಾಗುವುದು ಎಂದು ಹೇಳಿದರು.
ನಗರಸಭೆ ಉಪಾಧ್ಯಕ್ಷೆ ಸವಿತಾ ವಾಸು ಮಾತನಾಡಿ, ಇತ್ತೀಚೆಗೆ ನಿರ್ಭೀತಿಯಿಂದ ಬರೆಯುವ ಪತ್ರಕರ್ತರನ್ನು ಬೆದರಿಸುವ ಕೆಲಸ ಮಾಡಲಾಗುತ್ತಿದೆ. ಸಮಾಜ ನಿಮ್ಮ ಜತೆಗಿದೆ. ಸತ್ಯವನ್ನು ಭಯವಿಲ್ಲದೆ ಬಯಲಿಗೆ ತರಬೇಕು ಎಂದು ತಿಳಿಸಿದರು.
ಹಿರಿಯ ಪತ್ರಕರ್ತರಾದ ಸಂತೋಷ್‌ಕುಮಾರ್ ಕಾರ್ಗಲ್, ಗಿರೀಶ್ ರಾಯ್ಕರ್ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಶರಣ್ಯಾ ಆರ್. ನಾಯರ್ ಅವರನ್ನು ಪುರಸ್ಕರಿಸಲಾಯಿತು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ನಾಗೇಶ್, ಪ್ರಧಾನ ಕಾರ್ಯದರ್ಶಿ ಮಹೇಶ್ ಹೆಗಡೆ, ನಗರಸಭೆ ಸದಸ್ಯ ಆರ್.ಶ್ರೀನಿವಾಸ್, ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್, ರಾಜ್ಯ ಸಮಿತಿ ಸದಸ್ಯ ಎನ್.ರವಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಟಿ.ಅರುಣ್, ಎಂ.ಜಿ.ರಾಘವನ್, ಸಂಘದ ತಾಲೂಕು ಉಪಾಧ್ಯಕ್ಷ ಲೋಕೇಶಕುಮಾರ್, ರವಿ ನಾಯ್ಡು, ದೀಪಕ್ ಸಾಗರ್ ಇತರರಿದ್ದರು.