ನೆರೆ ರಾಜ್ಯಗಳಲ್ಲೂ ಪ್ರಕಾಶ್ ರೈ ಹೋರಾಡಲಿ

Prakash Raj
Published on

ಬೆಂಗಳೂರು: ಬಹುಭಾಷಾ ನಟ ಪ್ರಕಾಶ್ ರೈ, ನಮ್ಮ ರಾಜ್ಯಕ್ಕಿಂತ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಹೆಚ್ಚು ಪ್ರಭಾವಿ, ಜನಪ್ರಿಯರು. ಅಲ್ಲಿನ ರೈತರ ಭೂಸ್ವಾಧೀನದ ವಿರುದ್ಧ ಹೋರಾಟ ಮಾಡಿದರೆ ಒಳ್ಳೆಯದು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಸವಾಲು ಹಾಕಿದರು.

ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಹೋರಾಟದ ಹಕ್ಕಿದೆ. ನಾನು ಹೋರಾಟ ಮಾಡಿಕೊಂಡೇ ಬಂದವನು. ಈ ವಿಷಯ ಪ್ರಕಾಶ್ ರೈಗೆ ಗೊತ್ತಿರಲಿಕ್ಕಿಲ್ಲ. ಬರಪೀಡಿತ ವಿಜಯಪುರ ಜಿಲ್ಲೆಯನ್ನು ಹೋರಾಡಿಯೇ ನೀರಾವರಿ ಭೂಮಿಯನ್ನಾಗಿ ಮಾಡಿದ್ದೇನೆ. ಪ್ರಕಾಶ್ ರೈ ನಮಗಿಂತ ಆಂಧ್ರದಲ್ಲಿ ಹೆಚ್ಚು ಪ್ರಭಾವಿಗಳು ಮತ್ತು ಜನಪ್ರಿಯರು. ಬೇರೆಬೇರೆ ರಾಜ್ಯಗಳಲ್ಲೂ ರೈತರ ಭೂಸ್ವಾಧೀನದ ವಿರುದ್ಧ ಹೋರಾಟ ಮಾಡಿದರೆ ಒಳ್ಳೆಯದು ಎಂ.ಬಿ. ಪಾಟೀಲ್ ಕುಟುಕಿದರು.

ರಾಜ್ಯದಲ್ಲಿ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್‌ಗಾಗಿ 1,282 ಎಕರೆ ಮಾತ್ರ ಸ್ವಾಧೀನಕ್ಕೆ ಪಡೆಯಲು ನಿರ್ಧರಿಸಲಾಗಿದೆ. ಪಕ್ಕದ ಆಂಧ್ರಪ್ರದೇಶದಲ್ಲಿ ನಮ್ಮ ಗಡಿಗೇ ಅಂಟಿಕೊಂಡಿರುವ ಮಡಕಶಿರಾದಿಂದ ಪೆನುಗೊಂಡದವರೆಗೆ 10 ಸಾವಿರ ಎಕರೆ ಸ್ವಾಧೀನಪಡಿಸಿಕೊಂಡು, ಉಚಿತವಾಗಿ ಕೊಡುವುದಾಗಿ ಭರವಸೆ ನೀಡಿದೆ.

ಅಲ್ಲದೇ, ಕೈಗಾರಿಕಾ ಉದ್ದೇಶಗಳಿಗೆ 45 ಸಾವಿರ ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇನ್ಫೋಸಿಸ್, ಕಾಗ್ನಿಜೆಂಟ್, ಟಿಸಿಎಸ್ ಮುಂತಾದ 100 ಕಂಪನಿಗಳಿಗೆ ವಿಶಾಖಪಟ್ಟಣದಲ್ಲಿ 99 ಪೈಸೆಗೆ ಎಕರೆ ಭೂಮಿ ಕೊಡಲಾಗಿದೆ. ಇವೆಲ್ಲ ಪ್ರಕಾಶ್ ರೈಗೆ ಕಾಣಿಸುತ್ತಿಲ್ಲವೇ? ಎಂದು ಪ್ರಶ್ನಿಸಿದರು.

ಇತ್ತ ತಮಿಳುನಾಡಿನ ಹೊಸೂರು ನಮ್ಮಿಂದ 50 ಕಿ.ಮೀ. ದೂರದಲ್ಲಿದೆ. ಅಲ್ಲಿನ ಸರ್ಕಾರ ಈಗ ಆ ಪ್ರದೇಶವನ್ನು ಕೇಂದ್ರೀಕರಿಸಿ ಕೈಗಾರಿಕಾ ಬೆಳವಣಿಗೆಯನ್ನು ವಿಸ್ತರಿಸುತ್ತಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಲು ಮುಂದಾಗಿದೆ. ಇದಕ್ಕೆಲ್ಲ ಅಗ್ಗದ ದರದಲ್ಲಿ ಭೂಮಿ ಕೊಡುತ್ತಿದೆ. ಆಂಧ್ರ ಮತ್ತು ತಮಿಳುನಾಡಿನಲ್ಲಿ ಉದ್ಯಮ ನಡೆಸುತ್ತಿರುವವರಿಗೆ ಬೆಂಗಳೂರು ಬರೀ ಆಶ್ರಯತಾಣವಾಗಿ ಕಾಣುತ್ತಿದೆ. ಆಂಧ್ರದ ಯೋಜನೆ ಗೆದ್ದರೆ, ನಮ್ಮರಕ್ಷಣಾ ಮತ್ತು ಏರೋಸ್ಪೇಸ್ ಕಂಪನಿಗಳು ಅಲ್ಲಿಗೆ ಹೋಗಬಹುದು. ರಾಜ್ಯಕ್ಕೆ ಆಗುವ ನಷ್ಟವನ್ನು ಅಂದಾಜು ಮಾಡಲೂ ಸಾಧ್ಯವಿಲ್ಲ ಎಂದರು.

ಕರ್ನಾಟಕವು ದೇಶದ ರಕ್ಷಣೆ ಮತ್ತು ಏರೋಸ್ಪೋಸ್ ವಹಿವಾಟಿನಲ್ಲಿ ಶೇ.65 ಪಾಲು ಹೊಂದಿದ್ದು, ಜಾಗತಿಕವಾಗಿ ತೃತೀಯ ಸ್ಥಾನದಲ್ಲಿದೆ. ಎಚ್‌ಎಎಲ್, ಸ್ಯಾಫ್ರಾನ್, ಬೋಯಿಂಗ್, ಏರ್‌ಬಸ್, ಕಾಲಿನ್ಸ್, ಲಾಕ್ ಹೀಡ್ ಮಾರ್ಟಿನ್ ಮುಂತಾದ ದೈತ್ಯ ಕಂಪನಿಗಳಿವೆ. ದೇವನಹಳ್ಳಿ ವಿಮಾನ ನಿಲ್ದಾಣ ಪಕ್ಕದಲ್ಲೇ ಏರೋಸ್ಪೇಸ್ ಪಾರ್ಕ್ ಇದ್ದರೇ ಮತ್ತಷ್ಟು ಬಲ ಸಿಗಲಿದೆ. ಸಂತ್ರಸ್ತ ರೈತರಿಗೆ 2013ರ ಭೂಸ್ವಾಧೀನ ಕಾಯ್ದೆಯ ಪ್ರಕಾರವೇ ನ್ಯಾಯಯುತ ಪರಿಹಾರ ಕೊಡಲಾಗುತ್ತದೆ ಎಂದು ಸಚಿವ ಎಂ.ಟಿ. ಪಾಟೀಲ್ ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net