ಸಂಪಾದಕೀಯ| ಜನರು ಜಾಗೃತರಾಗಲಿ

Edit 3 Cyber Crime
Published on

ಖಾತೆಯಿಂದ ಹಣ ಎಗುರಿಸುವುದು, ಡೆಬಿಟ್​, ಕ್ರೆಡಿಟ್​ ಕಾರ್ಡ್​ ಪಿನ್​ ಕದ್ದು ವಂಚಿಸುವುದು, ಖಾತೆ/ಕಾರ್ಡ್​ ಬ್ಲಾಕ್​ ಆಗಿದೆ ಎಂದು ನಂಬಿಸಿ ದುಡ್ಡು ಕೀಳುವುದು, ಅಧಿಕ ಬಡ್ಡಿಯ ಆಸೆ ತೋರಿಸಿ ಇಡೀ ಠೇವಣಿ ಹಣವನ್ನೇ ಲಪಟಾಯಿಸಿ ಪರಾರಿಯಾಗುವುದು ಸೇರಿದಂತೆ ಸೈಬರ್​ ಅಪರಾಧದ ಕರಾಳ ಮುಖಗಳು ಒಂದೊಂದಾಗಿ ಅನಾವರಣಗೊಳ್ಳುತ್ತ, ಜನರನ್ನು ಬೆಚ್ಚೀಬಿಳಿಸುತ್ತಿವೆ. ಈ ಬಗ್ಗೆ ಆರ್​ಬಿಐ, ಇತರ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್​ಗಳು ಅರಿವು ಮೂಡಿಸುವ ನಿರಂತರ ಪ್ರಯತ್ನ ಮಾಡುತ್ತಿವೆಯಾದರೂ, ಜನಸಾಮಾನ್ಯರು ಆಮಿಷಕ್ಕೆ ಒಳಗಾಗಿ, ದಿಢೀರ್​ ದುಡ್ಡು ಮಾಡುವ ಆಸೆಗೆ ಬಿದ್ದು ಮೋಸದ ಬಲೆಗೆ ಸಿಲುಕುತ್ತಿದ್ದಾರೆ. ಈಗ ಹೊಸ ಅಪಾಯ ಎದುರಾಗಿರುವುದು ಚೀನಾದ ನಕಲಿ ಕಂಪನಿಗಳು ಮತ್ತು ಆ್ಯಪ್​ಗಳಿಂದ. ಚೀನಾದಿಂದ ಭಾರತ ಒಂದಿಲ್ಲೊಂದು ಆತಂಕ ಎದುರಿಸುತ್ತಲೇ ಇದ್ದು, ಆ ದೇಶಕ್ಕೆ ತಕ್ಕ ಉತ್ತರವನ್ನೂ ನೀಡಿದೆ. ಲಡಾಖ್​ ಕಣಿವೆಯಲ್ಲಿ ಡ್ರಾ$ಗನ್​ ರಾಷ್ಟ್ರ ಕಾಲುಕೆದರಿ ಜಗಳಕ್ಕೆ ಬಂದಾಗ, ವಿವಾದಿತ ಪ್ರದೇಶದಿಂದ ಅದು ಹಿಂದೆ ಸರಿಯುವಂತೆ ಮಾಡಿದ್ದು ಭಾರತದ ರಾಜತಾಂತ್ರಿಕ ವಿಜಯ.

ಲಡಾಖ್​ನ ಗಲ್ವಾನ್​ ಕಣಿವೆ ವಿವಾದದ ಬೆನ್ನಲ್ಲೇ ಭಾರತದಲ್ಲಿ ಚೀನಾ ಉತ್ಪನ್ನಗಳನ್ನು ನಿಷೇಧಿಸುವ ಆಂದೋಲನ ತೀವ್ರ ಸ್ವರೂಪ ಪಡೆದುಕೊಂಡಿತು. ಈ ಎದುರಾಳಿ ರಾಷ್ಟ್ರಕ್ಕೆ ತಕ್ಕ ಪಾಠ ಕಲಿಸಲೆಂದೇ ಕೇಂದ್ರ ಸರ್ಕಾರ ಕಠಿಣ ನಿರ್ಧಾರಗಳನ್ನು ತಳೆದು ಚೀನಾದ ನೂರಾರು ಆ್ಯಪ್​ಗಳನ್ನು ನಿಷೇಧಿಸಿತು, ಆಮದು ಪ್ರಮಾಣ ಕಡಿಮೆ ಮಾಡಿತು. ಭಾರತದಿಂದ ಈ ಬಗೆಯ ಪ್ರತಿಕ್ರಿಯೆ ನಿರೀಸದಿದ್ದ ಚೀನಾ ಬಳಿಕ "ಸೌಹಾರ್ದ'ದ ಮಾತುಗಳನ್ನಾಡಿತು. ಇದೆಲ್ಲವೂ ಒಂದು ಹಂತಕ್ಕೆ ಬಂದಿದೆ ಎನ್ನುವಾಗ, ಚೀನಾದ ನಾಗರಿಕರು ವಿವಿಧ ಸೋಗಿನಲ್ಲಿ ಭಾರತದ ನಾಗರಿಕರನ್ನು ವಂಚಿಸುತ್ತಿರುವ, ದುಡ್ಡು ಲಪಟಾಯಿಸುತ್ತಿರುವ ಜಾಲ ಪತ್ತೆಯಾಗಿರುವುದು ಹೊಸ ತಲೆನೋವು ಸೃಷ್ಟಿಸಿದೆ.

ನಕಲಿ ಇನ್​ವೆಸ್ಟ್​ಮೆಂಟ್​ ಆ್ಯಪ್​ಗಳ ಮೂಲಕ 5 ಲಕ್ಷ ಭಾರತೀಯರಿಗೆ 150 ಕೋಟಿ ರೂಪಾಯಿ ವಂಚಿಸಿದ ಚೀನಿಯರ ಗ್ಯಾಂಗ್​ ದೆಹಲಿ ಪೊಲೀಸರ ಬಲೆಗೆ ಬಿದ್ದಿರುವುದು ತಾಜಾ ವಿದ್ಯಮಾನ. ಈ ಗುಂಪಿನಲ್ಲಿ ಹನ್ನೊಂದು ಜನರಿದ್ದು, ಈ ಪೈಕಿ ಇಬ್ಬರು ಲೆಕ್ಕ ಪರಿಶೋಧಕರು. ಆ್ಯಪ್​ಗಳ ಮೂಲಕ ಹಣ ಹೂಡಿಕೆ ಮಾಡಿಸಿ ಗರಿಷ್ಠ ರಿಟರ್ನ್ಸ್​ ಕೊಡುವ ಭರವಸೆ ನೀಡುವ ಮಲ್ಟಿಲೆವೆಲ್​ ಮಾರ್ಕೆಟಿಂಗ್​ ಮಾಡೆಲ್​ (ಎಂಎಲ್​ಎಂ) ಮಾದರಿಯಲ್ಲಿ ವಂಚನೆ ನಡೆದಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ವಂಚನೆಯಲ್ಲಿ ಹಲವು ಚೀನೀ ಪ್ರಜೆಗಳು ಭಾಗಿಯಾಗಿದ್ದಾರೆ. ವಾಟ್ಸ್​ಆ್ಯಪ್​, ಟೆಲಿಗ್ರಾಂ ಮೂಲಕ ಜನರನ್ನು ಸಂಪರ್ಕಿಸುವ ಈ ವಂಚಕರ ಜಾಲ ಪಶ್ಚಿಮ ಬಂಗಾಳ, ನವದೆಹಲಿ, ಬೆಂಗಳೂರು, ಒಡಿಶಾ, ಅಸ್ಸಾಂ, ಸೂರತ್​ಗಳಲ್ಲಿ ಹೆಚ್ಚು ಜನರನ್ನು ಬಲೆಗೆ ಬೀಳಿಸಿಕೊಂಡಿದೆ ಎಂಬುದು ಆತಂಕಕಾರಿ ವಿಚಾರ. ಈ ಹಿಂದೆಯೂ ಇಂಥ ಪ್ರಕರಣ ವರದಿಯಾಗಿದ್ದಿದೆ. ಇಂಥ ನಕಲಿ ಕಂಪನಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಜನರೂ ಆನ್​ಲೈನ್​ನಲ್ಲಿ ಹಣಕಾಸು ವ್ಯವಹಾರಗಳನ್ನು ಮಾಡುವಾಗ ತುಂಬ ಎಚ್ಚರಿಕೆಯಿಂದ ಇರಬೇಕು. ಅಲ್ಲದೆ ಕಂಪನಿ, ಸಂಸ್ಥೆಗಳ ಪೂರ್ವಾಪರ ತಿಳಿಯದೆ ಹೂಡಿಕೆ ಅಥವಾ ಇತರ ಆರ್ಥಿಕ ಚಟುವಟಿಕೆಗೆ ಮುಂದಾಗಬಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net