

ಶಿವಮೊಗ್ಗ: ಶಕ್ತಿ ಯೋಜನೆ ಜತೆಗೆ ಇನ್ನೂ ನಾಲ್ಕು ಗ್ಯಾರಂಟಿಗಳನ್ನು ರಾಜ್ಯ ಸರ್ಕಾರ ಶೀಘ್ರವೇ ಜಾರಿಗೊಳಿಸುವ ಮೂಲಕ ಯೋಜನೆಗಳು ಅರ್ಹರಿಗೆ ಮುಟ್ಟುವಂತೆ ಮಾಡಬೇಕಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶಿವಮೊಗ್ಗ ವಿಭಾಗದಿಂದ ಭಾನುವಾರ ಶಕ್ತಿ ಯೋಜನೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ವಿಶಿಷ್ಟ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ಮಹಿಳೆಯರ ಸುರಕ್ಷತೆ ಆದ್ಯತೆ ನೀಡಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಗ್ರಾಮಾಂತರ ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಮಾತನಾಡಿ, ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆ ಎಲ್ಲ ಮಹಿಳೆಯರಿಗೂ ತಲುಪಬೇಕು. ಇನ್ಮುಂದೆ ಮನೆಗಳಲ್ಲಿ ಗಂಡು ಮಕ್ಕಳು ಹುಷಾರ್ ಆಗಿರಬೇಕು. ತಮ್ಮ ಪತ್ನಿ ಜತೆ ಜಗಳ ಆಡುವಂತಿಲ್ಲ. ಜಗಳ ಆಡಿದರೆ ಹೇಳದೆ, ಕೇಳದೆಯೇ ತವರು ಮನೆಗಳಿಗೆ ಹೋಗುವ ಸಾಧ್ಯತೆ ಇರುತ್ತದೆ ಎಂದು ನಗೆ ಚಟಾಕಿ ಹಾರಿಸಿದರು.
ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗದ ನಿಯಂತ್ರಣಾಧಿಕಾರಿ ಜಿ.ವಿಜಯಕುಮಾರ್ ಮಾತನಾಡಿ, ಶಿವಮೊಗ್ಗ ವಿಭಾಗದಿಂದ 44 ನಗರ ಸಾರಿಗೆ, 103 ಸಾಮಾನ್ಯ ಮತ್ತು 130 ವೇಗದೂತ ಬಸ್‌ಗಳು ಶಕ್ತಿ ಯೋಜನೆಗೆ ಒಳಪಟ್ಟಿವೆ ಎಂದರು.
ಸ್ಮಾರ್ಟ್‌ಕಾರ್ಡ್‌ಗೆ ಸೇವಾ ಸಿಂಧು ಮೂಲಕ ಅರ್ಜಿ ಆಹ್ವಾನಿಸಲಿದ್ದು ಅಲ್ಲಿವರೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ನೀಡಿರುವ ಗುರುತಿನ ಚೀಟಿಗಳ ಅಸಲಿ ಕಾರ್ಡ್‌ಗಳನ್ನು ತೋರಿಸಿ ಮಹಿಳೆಯರು ಟಿಕೆಟ್ ಪಡೆದು ಉಚಿತವಾಗಿ ಪ್ರಯಾಣಿಸಬಹುದು. ಶೇ.50ರಷ್ಟು ಆಸನಗಳನ್ನು ಪುರುಷರಿಗೆ ಕಾಯ್ದಿರಿಸಲಾಗುತ್ತದೆ ಎಂದು ಹೇಳಿದರು.
ಎಂಎಲ್‌ಸಿ ಡಿ.ಎಸ್.ಅರುಣ್, ಮಾಜಿ ಎಂಎಲ್‌ಸಿ ಆರ್.ಪ್ರಸನ್ನಕುಮಾರ್, ಮೇಯರ್ ಎಸ್.ಶಿವಕುಮಾರ್, ಪ್ರತಿಪಕ್ಷ ನಾಯಕಿ ರೇಖಾ ರಂಗನಾಥ, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಪಾಲಿಕೆ ಸದಸ್ಯರಾದ ಎಚ್.ಸಿ.ಯೋಗೇಶ್, ಯಮುನಾ ರಂಗೇಗೌಡ, ರಮೇಶ್ ಹೆಗ್ಡೆ, ಸತ್ಯನಾರಾಯಣ ರಾಜು, ಮೆಹಕ್ ಶರೀಫ್, ಸಮೀರ್ ಖಾನ್, ಯು.ಎಚ್.ವಿಶ್ವನಾಥ, ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಜಿಪಂ ಸಿಇಒ ಸ್ನೇಹಲ್ ಲೋಖಂಡೆ ಇತರರಿದ್ದರು.