

| ಪಂ. ಜಯತೀರ್ಥ ಮೇವುಂಡಿ
ನಾಡಿನ ಸುಪ್ರಸಿದ್ಧ ಸಂಗೀತಗಾರರಲ್ಲೊಬ್ಬರು ಪಂ.ಜಯತೀರ್ಥ ಮೇವುಂಡಿ. ನಾಲ್ಕು ದಶಕಗಳಿಂದ ದೇಶ ವಿದೇಶಗಳಲ್ಲಿ ಸಂಗೀತ ಕಛೇರಿ ನೀಡುತ್ತ ಬಂದವರು. ಹಿಂದುಸ್ತಾನಿ ಸಂಗೀತದಲ್ಲಿ ಕರ್ನಾಟಕ ಕಂಡ ಅಪರೂಪದ ಪ್ರತಿಭೆಗಳಲ್ಲೊಬ್ಬರಾದ ಜಯತೀರ್ಥ ಮೇವುಂಡಿ ವಿಶ್ವ ಸಂಗೀತ ದಿನದ ಹೊತ್ತಲ್ಲಿ ಸಂಗೀತದ ಕುರಿತು ಬರೆದ ಲೇಖನವಿದು.
ಇದು ನಾದಮಯ ಲೋಕ. ಬೀಸುವ ತಂಗಾಳಿ, ಬೆಟ್ಟದ ಮೇಲಿನ ಭರೆ›ನ್ನುವ ಗಾಳಿ, ಓಡುವ ರೈಲಿನ ಚುಕುಬುಕು, ಬಸ್ಸಿನ ಗಡಗಡ ಸದ್ದು, ವಿಮಾನದ ಹಾರಾಟ, ಹಕ್ಕಿಗಳ ಕಲರವ, ಸಿಂಹ ಗರ್ಜನೆ, ಘೀಳಿಡುವ ಆನೆ, ಹಸುವಿನ ಅಂಬಾ, ಕಾಗೆಯ ಕಾಕಾ, ಕೋಳಿಯ ಕೊಕ್ಕೋಕ್ಕೋ... ಎಲ್ಲದರ ಕೂಗಲ್ಲೂ, ದನಿಯಲ್ಲೂ ಲಯದ ಕಂಪು, ನಾದದ ಇಂಪು ಕಿವಿ ತುಂಬುತ್ತದೆ. ಎಲ್ಲದರಲ್ಲೂ ಸ್ವರ ಅವಿತಿರುತ್ತದೆ. ಹರಿಯುವ ನೀರಿನ ಕಲ ಕಲರವದಲ್ಲಿ, ಕೋಗಿಲೆ ಕೊರಳಿನ ಸುಮಧುರ ಸ್ವರದಲ್ಲಿ, ಭ್ರಮರದ ಝೇಂಕಾರದಲ್ಲಿ, ಮುನಿಗಳ ಓಂಕಾರದಲ್ಲಿ... ಎಲ್ಲೆಲ್ಲೂ. ನಮ್ಮ ನಡೆಯುವಿಕೆಗೂ ಲಯವಿದೆ. ಕುಟ್ಟುವಾಗ, ವಸ್ತುವನ್ನು ಎತ್ತಿ ಇಡುವಾಗಲೂ ಇದೆ. ಅದು ವರ್ಣಿಸಲಸದಳ. ಇಡೀ ಜೀವರಾಶಿ ಸಂಗೀತ ಬಿಟ್ಟ್ಟು ಇಲ್ಲವೇ ಇಲ್ಲ. ಒಂದಿಲ್ಲೊಂದು ನಾದ ಕೇಳಿಕೊಂಡೇ ಜೀವಿಸುತ್ತಿರುತ್ತವೆ.
ಜಗತ್ತು, ಸಂಗೀತ ಎಲ್ಲವೂ ದೇವರ ಸೃಷ್ಟಿ. ನಮ್ಮ ದೇವತೆಗಳೂ ಸಂಗೀತ ಪ್ರಿಯರೇ. ಕೃಷ್ಣ ಮುರಳೀಲೋಲ, ಶಿವನದು ಡಮರುಗ. ವೀಣಾಪಾಣಿ ಸರಸ್ವತಿ, ನಾರದರದು ತಂಬೂರಿ. ಗಣಪತಿಯೂ ಸಂಗೀತಪ್ರಿಯ. ಸಂಗೀತದ ವಿಧಗಳೂ ಹಲವಾರು. ಜಾನಪದ, ಶಾಸ್ತ್ರೀಯ, ಸುಗಮ, ರ್ಯಾಪ್, ಇಂಡಿಪಾಪ್, ಸಿನಿಮಾ ಸಂಗೀತ ಹೀಗೆ. ಅವೆಲ್ಲಕ್ಕೂ ಮೂಲ ಮಾತ್ರ ಸಪ್ತ ಸ್ವರದ ಮೊದಲ ಸ್ವರವಾದ ‘ಸಾ’.
ನಮ್ಮ ಪುರಾಣ, ಪ್ರಾಚೀನ ಗ್ರಂಥಗಳನ್ನು ಅವಲೋಕಿಸಿದಾಗ ಸ್ವತಃ ಶಿವನೇ ಒಂದು ಸಂಗೀತ ಎಂದು ತಿಳಿಯುತ್ತದೆ. ಅವನ ಕೈಯಲ್ಲಿ ಡಮರುಗ ಇದೆ. ಈಶ್ವರನ ಅಂಗಗಳಿಂದಲೇ ಬೇರೆ ಬೇರೆ ರಾಗ ಹುಟ್ಟಿವೆ. ಭೈರವಿ, ಭೈರಾಗಿ ಇತ್ಯಾದಿ. ತಾಂಡವ ನೃತ್ಯದಲ್ಲಿ ಲಯವೂ ಇದೆ, ನಾದವೂ ಇದೆ. ಹೀಗಾಗಿ ಇದು ಗಾಯನ, ವಾದನ, ನರ್ತನದ ಸಂಗಮ. ಅದರೊಂದಿಗೆ ಅಧ್ಯಾತ್ಮ ಮತ್ತು ವೇದ. ಸ್ವತಃ ಕೃಷ್ಣ ಪರಮಾತ್ಮನೇ ಕೊಳಲು ನುಡಿಸಿದ. ಅವನ ಕೊಳಲ ನಾದ ಕೇಳಿ ಮನುಷ್ಯ ಮಾತ್ರವಲ್ಲ, ಪಶು ಪಕ್ಷಿಗಳೆಲ್ಲ ಸಮ್ಮೋಹಿತವಾಗುತ್ತಿದ್ದವಂತೆೆ. ಸ್ತೋತ್ರ, ಶ್ಲೋಕ ಹೀಗೆ ಯಾವುದೇ ರೂಪದಲ್ಲಿದ್ದುದೂ ಸ್ವರವೇ. ಸಂಗೀತವೇ. ಸ್ವರ ಇಲ್ಲದೇ ಸಂಗೀತವಿಲ್ಲ. ಸಂಗೀತವಿಲ್ಲದೇ ಬದುಕೇ ಇಲ್ಲ.
ಪಾಶ್ಚಾತ್ಯ ಸಂಗೀತದಲ್ಲೂ ಮಹಾ ಮಹಿಮರು ಆಗಿ ಹೋಗಿದ್ದಾರೆ. ಗಾಯನ, ವಾದನದಲ್ಲಿ ಸಾಧನೆ ಮಾಡಿದವರಿದ್ದಾರೆ. ಅದೂ ಸರಳ ಅಲ್ಲ. ಆದರೆ ಅವರೂ ಭಾರತೀಯ ಸಂಗೀತಕ್ಕೆ ಮಾರು ಹೋಗುತ್ತಾರೆ. ಏಕೆಂದರೆ ಭಾರತೀಯ ಸಂಗೀತದಲ್ಲಿ ಭಾವವಿದೆ. ಧ್ಯಾನವಿದೆ. ಏಕಚಿತ್ತವಾಗಿ, ಏಕಾಂತದಲ್ಲಿ ‘ಓಂ’ ಅಂದರೆ ಸಾಕು, ಅದರಲ್ಲಿ ‘ಅ ಉ ಮ’ ಎಲ್ಲ ಸೇರಿದ ಸಂಗೀತವಿದೆ. ಇಡೀ ಜಗತ್ತೇ ಸಾ..... ಎನ್ನುತ್ತ ‘ಸಾ’ಗುತ್ತಿರುತ್ತದೆ. ಆದ್ದರಿಂದ ಅಧ್ಯಾತ್ಮದಂತೆ ಸಂಗೀತದಿಂದಲೂ ದೇವರ ಹತ್ತಿರ ಹೋಗಬಹುದಂತೆ. ನಮ್ಮ ಪರಂಪರೆಯೇ ಹಾಗಿದೆ. ನಮ್ಮ ದೇಶದ ಎಲ್ಲ ರಾಜ್ಯಗಳಿಂದಲೂ ಒಬ್ಬೊಬ್ಬರು ಸಂತರು ಆಗಿಹೋಗಿದ್ದಾರೆ. ತಾನಸೇನ, ಮೀರಾಬಾಯಿ, ಕಬೀರ, ಪುರಂದರ ದಾಸರು, ಕನಕದಾಸರು, ತ್ಯಾಗರಾಜರು, ಸೂರದಾಸರು, ರಾಮಾನುಜರು, ಅಣ್ಣಮಯ್ಯ, ಶಂಕರರು, ಮಧ್ವಾಚಾರ್ಯರು, ಫಂಡರಪುರ ವಿಠ್ಠಲ, ಬಸವಣ್ಣ, ಅಕ್ಕಮಹಾದೇವಿ... ಹೀಗೆ ಅದೆಷ್ಟೋ ಮಹಾಮಹಿಮರಿಗೆ ಸಂಗೀತ ಭಗವಂತನ ಸನಿಹ ಹೋಗಬಹುದಾದ ಒಂದು ಮಾರ್ಗ. ಎಲ್ಲ ಮಹಾಪುರುಷರು ಸಂಗೀತದಿಂದ ಭಗವಂತನನ್ನು ಒಲಿಸಿಕೊಂಡವರೇ. ಉದಾಹರಣೆಗೆ ರಾಘವೇಂದ್ರ ಸ್ವಾಮಿಗಳು. ಅವರು ಸ್ವತಃ ಕರ್ನಾಟಕ ಸಂಗೀತದ ವೀಣೆ ನುಡಿಸುತ್ತಿದ್ದರು. ಅವರ ಗುರುಗಳ ಗುರು ವಿಜಯೇಂದ್ರ ತೀರ್ಥರು. ಅವರು ಅರವತ್ನಾಲ್ಕೂ ವಿದ್ಯೆಯನ್ನೂ ಬಲ್ಲವರಾಗಿದ್ದರಂತೆ. ಅವರಿಗೆ ಕರ್ನಾಟಕ, ಹಿಂದುಸ್ತಾನಿ ಸಂಗೀತಗಳೆರಡೂ ಗೊತ್ತಿತ್ತು. ತಾನಸೇನ್, ಬೇಜು ಬಾವರೆ, ಬಡೇ ಗುಲಾಂ ಅಲಿ ಖಾನ್, ಅಬ್ದುಲ್ ಕರೀಂ ಖಾನ್, ಸವಾಯಿ ಗಂಧರ್ವ, ಭೀಮಸೇನ್ ಜೋಶಿ, ಎಂ. ಎಸ್, ಸುಬ್ಬುಲಕ್ಷಿ್ಮೕ, ಬಿಸ್ಮಿಲ್ಲಾ ಖಾನ್, ಬಾಲಮುರಳೀಕೃಷ್ಣ, ಕುಮಾರ ಗಂಧರ್ವ, ಗಂಗೂಬಾಯಿ ಹಾನಗಲ್, ಮಲ್ಲಿಕಾರ್ಜುನ ಮನ್ಸೂರ್ , ಬಸವರಾಜ ರಾಜಗುರು, ಅರ್ಜುನ ಸಾ ನಾಕೋಡ್ ಇಂಥ ಸಾವಿರಾರು ಮಂದಿ ಸಂಗೀತದಲ್ಲಿ ಹೆಸರುಮಾಡಲು ಕಾರಣ ಸಂಗೀತದ ದಿವ್ಯಶಕ್ತಿ. ನಾನು ಹೆಸರು ಮಾಡಿದ್ದೇನೆ ಅಂದರೆ ಅದು ನನ್ನದಲ್ಲ, ಸಂಗೀತದ ಶಕ್ತಿ. ಲಕ್ಷಾಂತರ ಹಾಡುಗಳನ್ನು ನೀಡಿದ ದಾಸಪರಂಪರೆಯ ಪುರಂದರರು, ಕನಕದಾಸರು ಮೊದಲಾದವರೆಲ್ಲ ಸಂಗೀತದಿಂದ ದೇವರ ಹತ್ತಿರ ಹೋಗಬಹುದೆಂದು ತೋರಿಸಿಕೊಟ್ಟರು.
ಸಂಗೀತಕ್ಕೆ ಜಾತಿ, ಧರ್ಮ ಭೇದ ಇಲ್ಲ. ಎಲ್ಲರನ್ನೂ ಅದು ಜೋಡಿಸುತ್ತದೆ. ಎಂದೇ ಎಲ್ಲೆಲ್ಲಿಂದಲೋ ಗಾನಕ್ಕೆ ಮರುಳಾಗಿ ಪ್ರತಿಕ್ರಿಯಿಸುತ್ತಿರುತ್ತಾರೆ. ಪ್ರತಿದಿನ ಮುಂಜಾನೆ ಹತ್ತು ನಿಮಿಷ ‘ಓಂ’ ಎನ್ನುತ್ತ ಕೂತರೆ ಎಲ್ಲ ಸುಸ್ತು ದೂರವಾಗುತ್ತದೆ. ಗಿಡಗಳನ್ನು ಸಮೃದ್ಧವಾಗಿ ಬೆಳೆಸುವ ಗುಣ, ರೋಗಗಳನ್ನು ಗುಣಪಡಿಸುವ ಶಕ್ತಿ ಸಂಗೀತಕ್ಕಿದೆ ಎನ್ನುತ್ತಾರೆ, ಸಂಗೀತ ಕೇಳುತ್ತ ಆಕಳು ಹೆಚ್ಚು ಹಾಲು ಕೊಡುತ್ತವಂತೆ. ಬೇರೆ ಬೇರೆ ರಾಗದ ಮೂಲಕ ಆ ನಿಟ್ಟಿನಲ್ಲಿ ಪ್ರಯೋಗಗಳು ನಡೆಯುತ್ತಿವೆ. ವಿಶ್ವ ಸಂಗೀತ ದೀನದ ಈ ಹೊತ್ತಿನಲ್ಲಿ ನಾನು ಹೇಳುವುದಿಷ್ಟು: ಸಂಗೀತದೊಳಗೆ, ಅಧ್ಯಾತ್ಮದೊಳಗೆ, ವೇದಮಂತ್ರಗಳೊಳಗೆ ಬಹಳಷ್ಟು ಸಿದ್ಧಿಯಿದೆ. ವೇದದೊಳಗೆ ಸ್ವರ ಇದೆ. ಸ್ವರದಲ್ಲಿ ಸಂಗೀತವಿದೆ. ಸ್ವರದ ಮೇಲಿನ ನಿರಂತರ ಸಾಧನೆ ಮಾಡುತ್ತ ಹೋದಾಗ ಸಂಗೀತ ಸಿದ್ಧಿಸುತ್ತದೆ. ಹೀಗಾಗಿ ಎಲ್ಲರೂ ಸಂಗೀತ ಕೇಳಿ. ಅದು ಯಾವುದೇ ಸಂಗೀತವಿರಲಿ, ಸಂಗೀತ ನಿತ್ಯದ ಬದುಕಿನ ಭಾಗವಾಗಲಿ. ಮುಂಬರುವ ದಿನಗಳಲ್ಲಿ ಕರೊನಾ ಅಥವಾ ಅಂಥ ಎಂಥದೇ ಕಷ್ಟ ಎದುರಾದಾಗಲೂ ಸಂಗೀತ, ಅಧ್ಯಾತ್ಮ ನಮ್ಮನ್ನು ಖಂಡಿತ ಕಾಪಾಡುತ್ತದೆ.