ಸಚಿವ ಸ್ಥಾನಕ್ಕೆ ಮಧು ರಾಜೀನಾಮೆ ನೀಡಲಿ

mahesh hulmar
ಮಹೇಶ್ ಹುಲ್ಮಾರ್
Published on

ಶಿಕಾರಿಪುರ: ಮಧು ಬಂಗಾರಪ್ಪ ಅವರು ತಮ್ಮ ಸಹೋದರಿ ಗೀತಾ ಶಿವರಾಜ್‌ಕುಮಾರ್ ಅವರ ಸೋಲಿನ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪುರಸಭೆ ಸದಸ್ಯ ಹುಲ್ಮಾರ್ ಮಹೇಶ್ ಒತ್ತಾಯಿಸಿದರು.

ತವರು ಕ್ಷೇತ್ರದಲ್ಲೇ ಸಹೋದರಿಗೆ ಲೀಡ್ ಕೊಡಿಸಲು ಆಗಿಲ್ಲ. ಅವರ ಸರ್ವಾಧಿಕಾರಿ ಧೋರಣೆಯಿಂದಲೇ ಗೀತಾ ಅವರಿಗೆ ಸೋಲಾಗಿದೆ. ಮೂಲ ಕಾಂಗ್ರೆಸಿಗರನ್ನು ಕಡೆಗಣಿಸಿ ಕಾಲು ಕಸದಂತೆ ಮಾಡಿದ ಸಚಿವರಿಗೆ ಈ ಸೋಲು ಪಾಠ ಕಲಿಸಿದೆ. ಉಸ್ತುವಾರಿ ಸಚಿವರಾಗಿ ಇಷ್ಟು ತಿಂಗಳುಗಳು ಕಳೆದರೂ ಪಕ್ಷ ಸಂಘಟನೆ ಮಾಡಲು ಆಗಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಈಗ ನಾಲ್ಕನೇ ಬಾರಿ ಸಂಸದರಾಗಿದ್ದಾರೆ. ಪ್ರತಿಬಾರಿ ಗೆದ್ದಾಗಲೂ ಹೆಚ್ಚಿನ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನಹರಿಸಿದರು. ಮಾಜಿ ಮುಖ್ಯಮಂತ್ರಿ, ಜನನಾಯಕ ಬಿ.ಎಸ್.ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಬೆಳೆದರೂ ತಮ್ಮ ಸ್ವಂತಿಕೆಯಿಂದ ಬೆಳೆದು ನಿಂತರು. ನೀವು ಸಹ ನಿಮ್ಮ ತಂದೆಯ ಹೆಸರಿನ ಮೇಲೆ ಸಚಿವರಾಗಿದ್ದೀರಿ. ಜಿಲ್ಲೆಗೆ ನಿಮ್ಮ ಕೊಡುಗೆಯೇನು ಎಂದು ಮಧು ಬಂಗಾರಪ್ಪ ಅವರನ್ನು ಪ್ರಶ್ನಿಸಿದರು.
ಕೇಂದ್ರದಲ್ಲಿ ಎನ್‌ಡಿಎ ಸರ್ಕಾರವೇ ಅಧಿಕಾರ ಹಿಡಿಯಲಿದೆ. ಮೋದಿಯವರೇ ಮತ್ತೆ ಪ್ರಧಾನಿಯಾಗಲಿದ್ದಾರೆ. ನಾಲ್ಕು ಬಾರಿ ಶಿವಮೊಗ್ಗ ಕ್ಷೇತ್ರದಿಂದ ಗೆದ್ದ ಬಿ.ವೈ.ರಾಘವೇಂದ್ರ ಕೇಂದ್ರದ ಮಂತ್ರಿಯಾಗಲಿದ್ದಾರೆ. ಅವರಿಗೆ ಜನನಾಯಕನಿಗೆಇರಬೇಕಾದ ಎಲ್ಲ ಅರ್ಹತೆಗಳೂ ಇವೆ. ಅವರೆಂದೂ ಚುನಾವಣೆ ಮುಗಿದ ಮೇಲೆ ಗಂಟುಮೂಟೆ ಕಟ್ಟಿಕೊಂಡು ಬೆಂಗಳೂರು ಕಡೆಗೆ ಹೋಗುವುದಿಲ್ಲ. ಜಿಲ್ಲೆಯನ್ನು ಒಂದು ಅಭಿವೃದ್ಧಿಯಿಂದ ಕಂಗೊಳಿಸುವ ವಿಶಿಷ್ಟ ಜಿಲ್ಲೆಯನ್ನಾಗಿಸುವ ತುಡಿತವಿದೆ. ಆದ್ದರಿಂದಲೇ ಮತ್ತೆ ಆಯ್ಕೆಯಾಗಿ ಬಂದಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net