

ಹುಣಸೂರು: ಆಧುನಿಕತೆಯ ವೈಭೋಗಕ್ಕೆ ಮನಸೋತು ಸನಾತನ ಸಂಸ್ಕೃತಿ ಮತ್ತು ಸಂಪ್ರದಾಯ ಮರೆತಿರುವ ಅಸಂಘಟಿತ ಹಿಂದು ಯುವಕರನ್ನು ಒಂದುಗೂಡಿಸುವ ಮಹತ್ತರ ಗುರಿಯನ್ನು ಬಜರಂಗದಳ ಹೊಂದಿದೆ ಎಂದು ಬಜರಂಗದಳದ ರಾಷ್ಟ್ರೀಯ ಸಂಯೋಜಕ ಸೂರ್ಯನಾರಾಯಣ ತಿಳಿಸಿದರು.
ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಸಹಯೋಗದಲ್ಲಿ ಗುರುವಾರ ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಆಯೋಜಿಸಿದ್ದ ಶೌರ್ಯ ಜಾಗರಣಾ ರಥಯಾತ್ರೆಯ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ವಿಶ್ವ ಹಿಂದು ಪರಿಷತ್ ಸ್ಥಾಪನೆಯಾಗಿ 59 ವರ್ಷ ಕಳೆದಿದ್ದು, ಈ ಸಂದರ್ಭದಲ್ಲಿ ದೇಶಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಾಮೂಹಿಕ ವಿವಾಹ, ಹನುಮಾನ್ ಚಾಲಿಸ ಪಠಣ, ಶೌರ್ಯ ಜಾಗರಣಾ ರಥಯಾತ್ರೆ.. ಹೀಗೆ ಇವೆಲ್ಲವೂ ಸನಾತನ ಹಿಂದು ಧರ್ಮದ ಸಂಸ್ಕೃತಿಯ ಆಚರಣೆಯಾಗಿದೆ ಎಂದು ಹೇಳಿದರು.
ರಾಮಾಯಣ, ಮಹಾಭಾರತ, ಭಗವದ್ಗೀತೆ ಹಾಗೂ ಸಂಪ್ರದಾಯವನ್ನು ಉಳಿಸಿ ಬೆಳೆಸುವ ಸಲುವಾಗಿ ಮತ್ತು ಇಂದಿನ ಯುವಕರಿಗೆ ಸನಾತನ ಧರ್ಮದ ಬಗ್ಗೆ ತಿಳಿಸಬೇಕಿದೆ. ಜತೆಗೆ ಪಾಲಕರು, ದೇವರು, ನಡವಳಿಕೆ ಬಗ್ಗೆ ತಿಳಿ ಹೇಳುವ ಕಾರ್ಯ ಮಾಡಬೇಕಿದೆ. ಸನಾತನ ಧರ್ಮದ ವಿರುದ್ಧದ ಹೇಳಿಕೆಗಳನ್ನು ಕಡೆಗಣಿಸುವ ಮೂಲಕ ಅಸಂಘಟಿತರಾಗಿರುವ ಹಿಂದು ಯುವಕರು ಧರ್ಮಕ್ಕಾಗಿ ದುಡಿಯುವ ಮತ್ತು ಜೀವಿಸುವ ಕಾರ್ಯ ಮಾಡಬೇಕಿದೆ ಎಂದರು.
ಬಜರಂಗದಳದ ಮಂಡ್ಯ ಜಿಲ್ಲಾ ಕಾರ್ಯದರ್ಶಿ ಬಾಲು ಮಾತನಾಡಿ, ಸನಾತನ ಧರ್ಮದ ವೈಚಾರಿಕತೆ ಮತ್ತು ಧಾರ್ಮಿಕತೆಯನ್ನು ಪ್ರಶ್ನಿಸುವ ಮನೋಭಾವಗಳನ್ನು ಮೆಟ್ಟಿನಿಲ್ಲಬೇಕಿದೆ ಎಂದರು.
ಶ್ರೀ ಸ್ವರೂಪಾನಂದಜೀ ಮಾತನಾಡಿ, ಮತಾಂತರ, ಲವ್‌ಜಿಹಾದ್, ಗೋಹತ್ಯೆ ಬಗ್ಗೆ ಎಲ್ಲರೂ ದನಿ ಎತ್ತಬೇಕಿದೆ. ದೇಶದ ಸಂಪತ್ತು, ಭಂಡಾರವನ್ನು ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕೆ ಉಪಯೋಗಿಸಿಕೊಂಡು ದೇಶವನ್ನು ಕೆಳಮಟ್ಟಕ್ಕೆ ತರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಗಾವಡಗೆರೆಯ ಶ್ರೀ ಗುರುಲಿಂಗಜಂಗಮದೇವರ ಮಠದ ನಟರಾಜ ಸ್ವಾಮೀಜಿ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಶ್ವ ಹಿಂದು ಪರಿಷತ್, ಬಜರಂಗದಳ ಇತರ ಅಂಗ ಸಂಸ್ಥೆಗಳು ಸನಾತನ ಧರ್ಮದ ಉಳಿವಿಗೆ, ಜಾತಿ ಜಾತಿಗಳನ್ನು ಒಟ್ಟುಗೂಡಿಸುವ, ಮೇಲು- ಕೀಳು ಪಿಡುಗನ್ನು ದೂರ ಮಾಡಿಸುವ ಕೆಲಸ ಮಾಡುತ್ತಿದೆ. ವಿಶ್ವದ ಹಿಂದುಗಳನ್ನು ಒಗ್ಗೂಡಿಸಲು ಪ್ರಯತ್ನ ನಡೆಯುತ್ತಿದ್ದು, ಇದಕ್ಕೆ ಮಠ-ಮಾನ್ಯಗಳು ಸಹಕಾರ ಅಗತ್ಯ ಎಂದರು.
ರಾಜ್ಯಾದ್ಯಂತ ಸಂಚರಿಸುತ್ತಿರುವ ಶೌರ್ಯ ಜಾಗರಣಾ ರಥಯಾತ್ರೆಯು ಹುಣಸೂರು ತಾಲೂಕು ಬಿಳಿಕೆರೆಗೆ ಆಗಮಿಸಿದಾಗ ಮಾದಳ್ಳಿ ಮಠದ ಶ್ರೀ ಸಾಂಬ ಸದಾಶಿವ ಸ್ವಾಮೀಜಿ, ಮೈಸೂರಿನ ಹಿರಿಯ ನ್ಯಾಯವಾದಿ ಸಿ.ವಿ.ಕೇಶವಮೂರ್ತಿ, ರಾ.ಸತೀಶ, ರಘು ಸಕಲೇಶಪುರ, ಮಹದೇವಪ್ಪ ಹಾಗೂ ಸಾರ್ವಜನಿಕರು ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದರು.
ಧಾರ್ಮಿಕ ಸಭೆಯಲ್ಲಿ ಬಜರಂಗದ ಜಿಲ್ಲಾಧ್ಯಕ್ಷ ಸೋಮಣ್ಣ ಬೈಲುಕುಪ್ಪೆ, ಉಪಾಧ್ಯಕ್ಷ ವಿ.ಎನ್. ದಾಸ್, ಡಾ.ಮೋದಿ ಇತರರು ಹಾಜರಿದ್ದರು. ಹುಣಸೂರು ನಗರಕ್ಕೆ ಆಗಮಿಸಿದ ರಥಯಾತ್ರೆಯನ್ನು ಚಂಡೆವಾದ್ಯ, ವೀರಗಾಸೆ ಕುಣಿತ ಮುಂತಾದ ಜಾನಪದ ಕಲಾ ತಂಡಗಳೊಂದಿಗೆ ಮೆರವಣೀಗೆ ಮೂಲಕ ಮೈದಾನಕ್ಕೆ ಕರೆತರಲಾಯಿತು. ನೂರಕ್ಕೂ ಹೆಚ್ಚು ಯುವಕರು ಭಗವಾಧ್ವಜದೊಂದಿಗೆ ಬೈಕ್ ರ‌್ಯಾಲಿ ಮೂಲಕ ಮೆರವಣಿಗೆಯಲ್ಲಿ ಸಾಗಿಬಂದರು.