ಮತ್ತಷ್ಟು ಪೂರಕ ಕ್ರಮಗಳು; ಲಸಿಕೆ ಸಮಸ್ಯೆ ಬಗೆಹರಿಯಲಿ..

Editorial
Published on

ಕರೊನಾ ವಿರುದ್ಧ ಹೋರಾಡಲು ಲಸಿಕೆಯೇ ಪ್ರಬಲ ಅಸ್ತ್ರ ಎಂದು ವೈದ್ಯಕೀಯ ಲೋಕವೇ ಹೇಳಿರುವುದರಿಂದ ಲಸಿಕೆಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಜನರು ಮೊದಲಿಗೆ ಲಸಿಕೆ ಪಡೆಯಲು ಉದಾಸೀನ ತೋರಿದ್ದು ಹೌದಾದರೂ, ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಲಸಿಕೆ ಪಡೆಯಲು ಮುಂದಾದರು. ಆದರೆ, ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಇನ್ನೂ ಲಸಿಕೆ ಸಿಗುತ್ತಿಲ್ಲ. 45 ವರ್ಷ ಮೇಲ್ಪಟ್ಟವರಿಗೂ ಎರಡನೇ ಡೋಸ್ ಸಿಗುತ್ತಿಲ್ಲ. ಬೆಂಗಳೂರು ಸೇರಿದಂತೆ ಬಹುತೇಕ ಎಲ್ಲ ಜಿಲ್ಲಾಕೇಂದ್ರಗಳಲ್ಲಿ ಇದೇ ಸ್ಥಿತಿ ಇದೆ. ಅಲ್ಲದೆ, ಲಸಿಕೆ ಅಭಿಯಾನಕ್ಕೆ ವೇಗ ನೀಡದಿದ್ದಲ್ಲಿ ಸೋಂಕು ನಿಯಂತ್ರಣ ಕಷ್ಟಸಾಧ್ಯ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇನ್ನಷ್ಟು ಹೊಸ ಕ್ರಮಗಳತ್ತ ಹೊರಳಿರುವುದು ಉತ್ತಮ ಬೆಳವಣಿಗೆ. ರಾಜ್ಯದಲ್ಲಿ ಲಸಿಕೆ ಉತ್ಪಾದನೆ ಪ್ರೋತ್ಸಾಹಿಸಲು ಪೂರಕ ಹೆಜ್ಜೆಗಳನ್ನು ಇರಿಸಿರುವ ಪರಿಣಾಮ ಕರ್ನಾಟಕಕ್ಕೆ ವ್ಯಾಕ್ಸಿನ್ ಲಭ್ಯತೆಯ ಪ್ರಮಾಣ ಹೆಚ್ಚಾಗಲಿದೆ. ರಾಯಚೂರಿನ ಶಿಲ್ಪಾ ಮೆಡಿಕೇರ್ ಧಾರವಾಡದಲ್ಲಿರುವ ತನ್ನ ಘಟಕದಲ್ಲಿ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದಿಸಲು ಅವಕಾಶ ಪಡೆದುಕೊಂಡಿದೆ. ಒಂದು ವರ್ಷದಲ್ಲಿ ಐದು ಕೋಟಿ ಲಸಿಕೆ ಉತ್ಪಾದನೆ ಮಾಡುವ ಗುರಿಹಾಕಿಕೊಂಡಿದೆ. ಮಾಲೂರಿನಲ್ಲಿ ಭಾರತ್ ಬಯೋಟೆಕ್​ನಿಂದ ಕೋವ್ಯಾಕ್ಸಿನ್ ಲಸಿಕೆ ಉತ್ಪಾದನೆ ಸದ್ಯದಲ್ಲೇ ಆರಂಭವಾಗಲಿದೆ. ಜೂನ್ ಅಂತ್ಯಕ್ಕೆ 1 ಕೋಟಿ, ಜುಲೈನಿಂದ 2-3 ಕೋಟಿ ಡೋಸ್ ಉತ್ಪಾದನೆಯ ಗುರಿ ಹಾಕಿಕೊಳ್ಳಲಾಗಿದೆ. ಈ ನಡುವೆ ಸರ್ಕಾರ ಲಸಿಕೆ ಖರೀದಿ ಪ್ರಕ್ರಿಯೆಯನ್ನೂ ಚುರುಕುಗೊಳಿಸಿದ್ದು, ಇನ್ನು 10 ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಲಸಿಕೆಗಳು ಲಭ್ಯವಾಗುವ ನಿರೀಕ್ಷೆ ಇದೆ.

ಸಮಸ್ಯೆ ತೀವ್ರ ಸ್ವರೂಪದಲ್ಲಿ ಇದ್ದಾಗ ಅದಕ್ಕೆ ಬೇರೆ-ಬೇರೆ ಆಯಾಮದ ಪರಿಹಾರಗಳನ್ನು ಹುಡುಕುವುದು ಅಗತ್ಯ. ಲಸಿಕೆ ವಿಷಯದಲ್ಲಿ ಅಂಥ ಸಾಧ್ಯತೆಗಳನ್ನು ಗಂಭೀರವಾಗಿ ಪರಿಗಣಿಸಿ, ಹೊಸ ಹಾದಿ ಹುಡುಕುತ್ತಿರುವುದು ಸಮಾಧಾನಕರ ಬೆಳವಣಿಗೆ. ನಮ್ಮ ಆರೋಗ್ಯ ವ್ಯವಸ್ಥೆ ಹೇಗೆ ಸನ್ನದ್ಧವಾಗಿ ಇರಬೇಕು ಎಂಬ ಪಾಠವನ್ನೂ ಕರೊನಾ ಸೋಂಕಿನ ಹಾವಳಿ ಕಲಿಸಿದೆ. ವೈದ್ಯಕೀಯ ಆಮ್ಲಜನಕದ ಉತ್ಪಾದನೆ ಕ್ರಮೇಣ ಹೆಚ್ಚುತ್ತಿದ್ದು, ಐಸಿಯು ಹಾಸಿಗೆಗಳ ಲಭ್ಯತೆ ಸ್ಥಿತಿಯೂ ಸುಧಾರಣೆ ಆಗುತ್ತಿದೆ.

ಕಳೆದ ವರ್ಷ ಸೋಂಕಿನ ಮೊದಲ ಅಲೆಯ ಸಂದರ್ಭದಲ್ಲಿ ಪಿಪಿಇ ಕಿಟ್, ಮುಖಗವಸುಗಳ ಭಾರಿ ಕೊರತೆ ಎದುರಾಗಿತ್ತು. ಅಲ್ಲದೆ ಅದು ಹೊಸ ಸ್ವರೂಪದ ಸಮಸ್ಯೆಯಾಗಿತ್ತು ಕೂಡ. ಆದರೂ ಸ್ವಲ್ಪ ಸಮಯದಲ್ಲೇ ಆ ಸಮಸ್ಯೆ ನಿವಾರಣೆಯಾಗುವ ಜತೆಗೆ, ಮಾಸ್ಕ್, ಪಿಪಿಇ ಕಿಟ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಯಿತು. ಇಡೀ ಆರೋಗ್ಯ ವ್ಯವಸ್ಥೆ ಈಗ ಸ್ವಾವಲಂಬಿಯಾಗುವ ಕಾಲ. ಲಸಿಕೆ ವಿಷಯದಲ್ಲೂ ಕ್ರಮೇಣ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಗಳಿವೆ. ಈಗ ತೋರಿರುವ ಕಾಳಜಿ, ತೆಗೆದುಕೊಂಡಿರುವ ಕ್ರಮಗಳು ಸಮರ್ಪಕ ಅನುಷ್ಠಾನ ರೂಪ ತಳೆದಾಗ ಬದಲಾವಣೆ ಸಾಧ್ಯವಾಗುತ್ತದೆ. ಮಾಹಿತಿ-ತಂತ್ರಜ್ಞಾನ

ರಂಗದಲ್ಲಿ ಜಾಗತಿಕ ಮಟ್ಟದಲ್ಲಿ ವರ್ಚಸ್ಸು ಪಡೆದುಕೊಂಡಿರುವ ಕರ್ನಾಟಕ ಆರೋಗ್ಯ ಕ್ಷೇತ್ರದಲ್ಲಿನ ಸವಾಲುಗಳನ್ನೇ ಅವಕಾಶವನ್ನಾಗಿ ಪರಿವರ್ತಿಸಿಕೊಂಡು, ಬೆಳವಣಿಗೆ ಸಾಧಿಸಲಿ. ಮುಂಬರುವ ದಿನಗಳಲ್ಲಿ ಎಲ್ಲ ವಯೋಮಾನದವರಿಗೂ ಲಸಿಕೆ ಲಭ್ಯತೆ ಖಚಿತಗೊಳಿಸಲಿ. ಲಸಿಕೆ ಉತ್ಪಾದನೆ ನಿಟ್ಟಿನಲ್ಲಿನ ಕ್ರಮಗಳು ರಾಜ್ಯಕ್ಕೆ ಲಾಭ ತಂದುಕೊಡಲಿ. ಈ ಪ್ರಕ್ರಿಯೆಯಲ್ಲಿನ ತೊಡಕುಗಳನ್ನು ನಿವಾರಿಸುವುದು ಮೊದಲ ಆದ್ಯತೆಯಾಗಲಿ. ಆಗಲೇ ಕರೊನಾ ವಿರುದ್ಧದ ಸಮರ ಪರಿಣಾಮಕಾರಿಯಾಗಿ ನಡೆಸಲು ಸಾಧ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net