ಕೃಷಿಗೆ ಪೂರಕವಾಗಿ ಎಐ ಬಳಕೆಯಾಗಲಿ

ಕೃತಕ ಬುದ್ಧಿಮತ್ತೆ ಮತ್ತು ಸಮಾಜ ಕುರಿತ ವಿಚಾರ ಸಂಕಿರಣ
Seminar on Artificial Intelligence and Society
ಹೊಳೆಹೊನ್ನೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಕೃತಕ ಬುದ್ಧಿಮತ್ತೆ ಮತ್ತು ಸಮಾಜ ಕುರಿತ ವಿಚಾರ ಸಂಕಿರಣವನ್ನು ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ. ಎಂ.ವಿ.ಧನಂಜಯ ಉದ್ಘಾಟಿಸಿದರು. ಡಾ. ಕೆ.ಆರ್.ಪ್ರತಿಭಾ, ಭಾರತಿ ದೇವಿ, ಪ್ರಶಾಂತ್ ಜಯರಾಂ ಇತರರಿದ್ದರು.
Published on: 

ಹೊಳೆಹೊನ್ನೂರು: ಕೃತಕ ಬುದ್ಧಿಮತ್ತೆಯ ಆಧುನಿಕ ತಂತ್ರಜ್ಞಾನವನ್ನು ಭಾರತೀಯ ಕೃಷಿ ಪದ್ಧತಿಗೆ ಪೂರಕವಾಗಿ ಅಭಿವೃದ್ಧಿಪಡಿಸಿ ಕಾರ್ಯರೂಪಕ್ಕೆ ತರುವಂತಾಗಬೇಕು ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿವಿಯ ಕುಲಪತಿ ಡಾ. ಎಂ.ವಿ.ಧನಂಜಯ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಕೃತಕ ಬುದ್ಧಿಮತ್ತೆ ಮತ್ತು ಸಮಾಜ ಕುರಿತ ಒಂದು ದಿನದ ಬಹುಶಿಸ್ತೀಯ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರದಲ್ಲಿ ಕೋಟ್ಯಂತರ ಜನರು ಭೂ ಒಡೆಯರಿದ್ದಾರೆ. ಅವರಿಗೆ ಸರಿಯಾದ ತಾಂತ್ರಿಕ ಮಾರ್ಗದರ್ಶನ ಅಗತ್ಯ. ಅದಕ್ಕೆ ಮಾಹಿತಿ ತಂತ್ರಜ್ಞಾನ ಬಳಕೆ ಆಗಬೇಕು. ಇಂದಿನ ವಿದ್ಯಾರ್ಥಿಗಳು ದೇಶದ ಪ್ರಗತಿಗೆ ತಂತ್ರಜ್ಞಾನ ಹಾಗೂ ಕೌಶಲ ಹೊಂದಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಆಧುನಿಕ ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಇದರಿಂದ ವಿಶ್ವದ ಜತೆ ಸುಲಭವಾಗಿ ಸಂಪರ್ಕ ಕಲ್ಪಿಸಲು ಅವಕಾಶ ಇದೆ ಎಂದರು.

ಅಮೆರಿಕದ ಸಾಲಿಸ್‌ಬರಿ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಡಾ. ಪ್ರವೀಣ್ ಜಿ. ಸಪ್ತರ್ಷಿ ಮಾತನಾಡಿ, ಕೃತಕ ಬುದ್ಧಿಮತ್ತೆ ಬಂಡವಾಳಶಾಹಿಗಳ ಕೈಯಲ್ಲಿರುವ ಸಾಧನವಾಗದೆ ನಮ್ಮೆದುರಿನ ವಾಸ್ತವಿಕ ಸಮಸ್ಯೆಗಳಿಗೆ ಸ್ಪಂದಿಸಬೇಕು. ಕೃತಕ ಬುದ್ಧಿಮತ್ತೆ ಯುಗದಲ್ಲಿ ಕಲ್ಪಿತ ಜ್ಞಾನಕ್ಕಿಂತ ಅನುಭವದ ಹಿನ್ನೆಲೆಯ ಜ್ಞಾನ ಮುನ್ನೆಲೆಗೆ ಬರುವಂತೆ ನಾವು ಮಧ್ಯಪ್ರವೇಶಿಸುವ ಅಗತ್ಯವಿದೆ ಎಂದು ತಿಳಿಸಿದರು.

ಅಮೆರಿಕದ ಹಿರಿಯ ತಂತ್ರಜ್ಞ ಪ್ರಶಾಂತ್ ಜಯರಾಂ ಮಾತನಾಡಿ, ಇಂದು ಕೃತಕ ಬುದ್ಧಿಮತ್ತೆ ಬದುಕನ್ನು ಸುಲಭ ಮಾಡಿದೆ. ಆದರೆ ನಾವು ಸಿದ್ಧ ಉತ್ತರಗಳನ್ನು ಪಡೆಯುವುದರ ಆಚೆಗೆ ಸೃಜನಶೀಲವಾಗಿ ಉತ್ತರ ಕಂಡುಕೊಳ್ಳುವ ಕಡೆಗೆ ಸಾಗಬೇಕಿದೆ. ಕೃತಕ ಬುದ್ಧಿಮತ್ತೆ ಉಪಯೋಗ ಪಡೆಯಬೇಕು. ಆದರೆ ಅದನ್ನು ಯಥಾಸ್ಥಿತಿ ಒಪ್ಪಿಕೊಳ್ಳದೆ ಪ್ರಶ್ನಿಸಬೇಕು ಎನ್ನುವುದನ್ನು ಅರಿತುಕೊಳ್ಳಬೇಕು ಎಂದರು.

ಶಾಸಕಿ ಶಾರದಾ ಪೂರ‌್ಯಾನಾಯ್ಕಾ, ಪ್ರಾಚಾರ್ಯೆ ಡಾ. ಕೆ.ಆರ್.ಪ್ರತಿಭಾ, ಕುವೆಂಪು ವಿವಿ ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಡಾ. ಬಸವರಾಜ್ ಜಗದಾಳೆ, ಶ್ರೀಲಂಕಾ ವಿವಿಯ ಸಂಪನ್ಮೂಲ ವ್ಯಕ್ತಿ ಡಾ. ಎ.ಜಿ.ಅಮರಸಿಂಘೆ, ಡಾ. ಶಿಲುಜಾಸ್, ಡಾ. ಶಬಾನಾ ಫರ್ಹೀನ್, ಐಕ್ಯುಎಸಿ ಸಂಚಾಲಕಿ ಡಾ. ಪಿ.ಭಾರತಿದೇವಿ, ವಿಚಾರ ಸಂಕಿರಣದ ಸಂಯೋಜಕ ಎಸ್. ನಾಗರಾಜ್ ನಾಯ್ಕ, ಎಸ್.ಆರ್ ಶಂಕರ್, ಕೆ.ದೀಪಾ, ರೋಹನ್ ಡಿಕಾಸ್ಟ, ಸುರೇಶ್ ಸಾಗರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net