ಸುಖಿ ಸಮಾಜ ನಿರ್ಮಾಣವಾಗಲಿ

kdr upanayana
ಕಡೂರು ತಾಲೂಕಿನ ಚಿಕ್ಕಬಾಸೂರಿನಲ್ಲಿ ಶ್ರೀ ವೈಷ್ಣವ ಸಭಾ ಏರ್ಪಡಿಸಿದ್ದ ಸಾಮೂಹಿಕ ಉಪನಯನದ ಧಾರ್ಮಿಕ ಸಭೆಯಲ್ಲಿ ಯತಿರಾಜ ಮಠದ ಯದುಗಿರಿ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ಮಾತನಾಡಿದರು. ಕೆ.ಎಸ್. ಆನಂದ್, ವೈ.ಎಸ್.ವಿ.ದತ್ತ, ಹಿರೇಮಗಳೂರು ಕಣ್ಣನ್ ಮತ್ತಿತರರಿದ್ದರು.
Published on

ಕಡೂರು: ಸ್ವಾರ್ಥ ತುಂಬಿದ ಇಂದಿನ ಕಾಲದಲ್ಲಿ ಧರ್ಮ ಮಾರ್ಗದಲ್ಲಿರುವ ಸುಖಿ ಸಮಾಜ ನಿರ್ಮಾಣವಾಗಬೇಕು ಎಂದು ಮೇಲುಕೋಟೆ ಯತಿರಾಜ ಮಠದ ಯದುಗಿರಿ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ಹೇಳಿದರು.
ತಾಲೂಕಿನ ಚಿಕ್ಕಬಾಸೂರಿನಲ್ಲಿ ಗುರುವಾರ ತಾಲೂಕು ಶ್ರೀ ವೈಷ್ಣವ ಸಭಾ ಏರ್ಪಡಿಸಿದ್ದ ಸಾಮೂಹಿಕ ಉಪನಯನದಲ್ಲಿ ವಟುಗಳಿಗೆ ಸಮಾಸ್ರಯಣ ಪಂಚ ಸಂಸ್ಕಾರ ದೀಕ್ಷೆ ನೆರವೇರಿಸಿ ನಂತರ ನಡೆದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಮಾಜದಲ್ಲಿ ನೆಮ್ಮದಿಯ ವಾತಾವರಣ ದೂರವಾಗುತ್ತಿದೆ. ರಾಮಾನುಜಾಚಾರ್ಯರು ಸುಖೀ ಸಮಾಜದ ಕಲ್ಪನೆಯಲ್ಲಿ ಸಮಾನತೆಯ ಕ್ರಾಂತಿ ಮಾಡಿದರು. ಆಗ ಇದ್ದ ನೆಮ್ಮದಿಯ ವಾತಾವರಣ ಇಂದು ಇಲ್ಲ ಎಂದರು.
ರಾಮಾನುಜಾಚಾರ್ಯರ ಸ್ವಾರ್ಥರಹಿತ ಸಮಾನತೆಯ ಸಮಾಜದ ಆಶಯ ಸಾಕಾರಗೊಳಿಸಲು ಶ್ರೀಮಠ ಶ್ರಮಿಸುತ್ತಿದೆ. ಶ್ರೀವೈಷ್ಣವ ಸಭಾ ಅದಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಸಮಾಜದಲ್ಲಿ ಧಾರ್ಮಿಕ ಮನೋಭಾವನೆಯನ್ನು ಹೆಚ್ಚಿಸುವಲ್ಲಿ ವೈಷ್ಣವ ಸಮಾಜದ ಕಾರ್ಯ ಶ್ಲಾಘನೀಯ. ಸಮಾಜದ ಎಲ್ಲ ಕಾರ್ಯಗಳಿಗೆ ನನ್ನ ಸಹಕಾರ ನೀಡುತ್ತೇನೆ ಎಂದರು.
ಕನ್ನಡ ಪೂಜಾರಿ ಡಾ. ಹಿರೇಮಗಳೂರು ಕಣ್ಣನ್ ಮಾತನಾಡಿ, ನಮ್ಮ ಸಂಸ್ಕೃತಿಯನ್ನುಳಿಸುವ ಶಕ್ತಿ ನಮ್ಮಲ್ಲಿಯೇ ಇದೆ. ಯತಿರಾಜ ಮಠದಂತಹ ಧಾರ್ಮಿಕ ಸಂಸ್ಥೆಗಳು ಈ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ ಎಂದು ಹೇಳಿದರು.
ಮಾಜಿ ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ, ಎಲ್ಲ ಇದ್ದರೂ ಎಲ್ಲೋ ಒಂದು ಕಡೆ ನೆಮ್ಮದಿಯಿಲ್ಲದಂತಹ ವಾತಾವರಣ ನಮ್ಮನ್ನು ಕಾಡುತ್ತಿದೆ. ಅದಕ್ಕೆ ಯತಿರಾಜ ಮಠದಂತಹ ಧಾರ್ಮಿಕ ಸಂಸ್ಥೆಗಳ ಮಾರ್ಗದರ್ಶನ ಅತ್ಯಗತ್ಯ ಎಂದರು. ಗ್ರಾಮಕ್ಕೆ ಆಗಮಿಸಿದ ಯತಿರಾಜ ಮಠದ ಶ್ರೀಗಳನ್ನು ಗ್ರಾಮದ ಪ್ರವೇಶದಲ್ಲಿ ಪೂರ್ಣಕುಂಭ ಸ್ವಾಗತ ನೀಡಿ ಕರೆತರಲಾಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು 50ಕ್ಕೂ ಹೆಚ್ಚು ವೈಷ್ಣವ ವಟುಗಳಿಗೆ ಸ್ವಾಮೀಜಿಯವರು ಶ್ರೀ ವೈಷ್ಣವ ದೀಕ್ಷೆ ನೀಡಿದರು. ಕಲಿಯನ್ ರಾಮಾನುಜ ದಾಸನ್, ರವಿನರಸಿಂಹನ್, ಸಾಲ್ಕಟ್ಟೆ ಶ್ರೀನಿವಾಸ್, ಭಾರತಿ, ತಾಲೂಕು ವೈಷ್ಣವ ಸಭಾ ಅಧ್ಯಕ್ಷ ಹನುಮಂತರಾಯ, ಉಪಾಧ್ಯಕ್ಷ ಸಂತೋಷ್, ಮಾರುತಿ ಕಶ್ಯಪ್, ರಾಜ್ಯ ಮುಜರಾಯಿ ಅರ್ಚಕರ ಸಂಘದ ಅಧ್ಯಕ್ಷ ವೆಂಕಟಾಚಲಯ್ಯ, ಮುಖಂಡರಾದ ಜಿಗಣೇಹಳ್ಳಿ ನೀಲಕಂಠಪ್ಪ, ಟಿ.ಆರ್.ಲಕ್ಕಪ್ಪ, ಸಿ.ಎಚ್. ಪ್ರೇಮ್ ಕುಮಾರ್, ಚಂದ್ರಶೇಖರ್, ಈಶ್ವರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net