

Leopard : ಒಡಿಶಾದ ನುವಾಪಡಾ ಜಿಲ್ಲೆಯಲ್ಲಿ ಚಿರತೆಯನ್ನು ಬೇಟೆಯಾಡಿದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಬೇಟೆಗಾರರು ಚಿರತೆಯನ್ನು ಕೊಂದು, ಚರ್ಮವನ್ನು ಸುಲಿದು, ಮಾಂಸವನ್ನು ಬೇಯಿಸಿ ತಿಂದಿದ್ದಾರೆ.
ಈ ದುಷ್ಕೃತ್ಯ ಎಸಗಿದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ. ನುವಾಪಡಾ ಜಿಲ್ಲೆಯ ದೇವಧಾರಾ ಗ್ರಾಮದ ಬಳಿ ಈ ಘಟನೆ ನಡೆದಿದೆ.
ಅರಣ್ಯ ಇಲಾಖೆಯ ಪ್ರಕಾರ, ಇದೇ ತಿಂಗಳ 16 ರಂದು ಪುಸ್ತಮ್ ಚಿಂದಾ (58) ಮತ್ತು ಹೃಷಿಕೇಶ ಚಿಂದಾ (40) ಎಂಬುವರು ಕಾಡುಹಂದಿಗಳನ್ನು ಹಿಡಿಯಲು ಕಾಡಿನಲ್ಲಿ ಬಲೆ ಬೀಸಿದ್ದರು. ದುರಾದೃಷ್ಟವಶಾತ್ ಆ ಬಲೆಯಲ್ಲಿ ಚಿರತೆಯೊಂದು ಸಿಕ್ಕಿಬಿದ್ದಿದೆ. ಬಳಿಕ ಚಿರತೆಯನ್ನು ಕೊಂದು, ಚರ್ಮ ಸುಲಿದು, ಮಾಂಸವನ್ನು ಬೇಯಿಸಿ ತಿಂದಿದ್ದಾರೆ ಎಂದು ಆರೋಪಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ತಂಡ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿದಾಗ, ಸ್ಥಳದಲ್ಲಿ ಚಿರತೆ ಚರ್ಮ, ತಲೆ ಮತ್ತು ಕೆಲವು ಬೇಯಿಸಿದ ಮಾಂಸದ ತುಣುಕುಗಳು ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವೇಳೆ ಇಬ್ಬರು ಆರೋಪಿಗಳನ್ನೂ ಬಂಧಿಸಲಾಗಿದೆ. ಆದರೆ, ಮತ್ತಿಬ್ಬರು ಪರಾರಿಯಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಈ ಘಟನೆ ಕುರಿತು ಖರಿಯಾರ್ ಪ್ರಾದೇಶಿಕ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್), ಎಂಡಿ ಮುಸ್ತಫಾ ಸಲೇಹಾ ಮಾತನಾಡಿ, ಈ ಪ್ರಕರಣವು ವನ್ಯಜೀವಿ ಸಂರಕ್ಷಣೆ ವಿರುದ್ಧದ ಗಂಭೀರ ಅಪರಾಧವನ್ನು ಪ್ರತಿನಿಧಿಸುತ್ತದೆ. ಕಾಡು ಪ್ರಾಣಿಗಳ ಪಟ್ಟಿಯಲ್ಲಿರುವ ಚಿರತೆಯನ್ನು ಕೊಂದು ತಿನ್ನುವ ದೃಶ್ಯ ಹಿಂದೆಂದೂ ಕಂಡಿರಲಿಲ್ಲ. ಅರಣ್ಯ ಪ್ರಾಣಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ. ತನಿಖೆ ಮುಗಿದ ನಂತರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ ಎಂದರು ಹೇಳಿದರು. (ಏಜೆನ್ಸೀಸ್)