ಭಯ ಹುಟ್ಟಿಸಿದ ಭಯಾನಕ ಚಿರತೆ; 28 ಕುರಿಗಳನ್ನು ತಿಂದು ಹಾಕಿರುವ ಚಿರತೆ

22-RNR-03A
Published on

ರಾಣೆಬೆನ್ನೂರ: ತಾಲೂಕಿನ ಮೇಡ್ಲೇರಿ ಗ್ರಾಮದ ಸುತ್ತಮುತ್ತಲೂ ಓಡಾಡುತ್ತಿರುವ ಚಿರತೆಯೊಂದು ಕಳೆದ ಒಂದು ವಾರದಲ್ಲಿ 28 ಕುರಿ ಮರಿಗಳನ್ನು ತಿಂದು ಹಾಕಿದ್ದು, ಗ್ರಾಮಸ್ಥರಲ್ಲಿ ಭಾರಿ ಆತಂಕ ಮೂಡಿಸಿದೆ.

ಗ್ರಾಮದ ಕುರಿಗಾಹಿ ತಿರಕಪ್ಪ ದೊಡ್ಡಬುಡ್ಡಳರ ಎಂಬುವರ 10 ಹಾಗೂ ಇನ್ನೊಬ್ಬ ಕುರಿಗಾಹಿಯ 18 ಕುರಿಗಳನ್ನು ಚಿರತೆ ತಿಂದು ಹಾಕಿದೆ.

ಇವರು ಗ್ರಾಮದ ಹೊರವಲಯದಲ್ಲಿ ಕುರಿಗಳನ್ನು ನಿಲ್ಲಿಸಲು ದಡ್ಡಿಗಳನ್ನು ಮಾಡಿಕೊಂಡಿದ್ದಾರೆ. ಹಗಲು ಹೊತ್ತಿನಲ್ಲಿ ಕುರಿಗಳನ್ನು ಮೇಯಿಸಿಕೊಂಡು ಬಂದು ರಾತ್ರಿ ಈ ದಡ್ಡಿಗಳಲ್ಲಿ ನಿಲ್ಲಿಸುತ್ತಿದ್ದಾರೆ. ಆದರೆ, ರಾತ್ರೋರಾತ್ರಿ ದಾಳಿ ನಡೆಸುತ್ತಿರುವ ಚಿರತೆ ಕುರಿಗಳನ್ನು ತಿಂದು ಪರಾರಿಯಾಗುತ್ತಿದೆ. ಚಿರತೆ ದಾಳಿಯಿಂದ ಭಯಗೊಳುತ್ತಿರುವ ಕುರಿಗಳು ದಿಕ್ಕಾಪಾಲಾಗಿ ಓಡಾಡುತ್ತಿವೆ.

ಕಣ್ಣೀರು ಹಾಕುತ್ತಿರುವ ಕುರಿಗಾಹಿಗಳು...

ಮೇಡ್ಲೇರಿ ಗ್ರಾಮದ ಸುತ್ತಲಿನ ಅರಣ್ಯ ಪ್ರದೇಶದಿಂದ ಬರುವ ಚಿರತೆ ಕುರಿಗಳನ್ನೇ ಟಾರ್ಗೇಟ್​ ಮಾಡಿಕೊಂಡು ದಾಳಿ ಮಾಡುತ್ತಿದೆ. ಬೆಲೆ ಬಾಳುವ ಕುರಿಗಳು ಚಿರತೆ ಬಾಯಿಗೆ ಆಹಾರವಾಗಿದ್ದು, ಲಾಂತರ ರೂ. ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಪರಿಹಾರ ಕೊಡುತ್ತದೆ ನಿಜ. ಆದರೆ, ಅದು ಯಾವುದಕ್ಕೂ ಸಾಲದು. ಕುರಿ ಜೀವಂತ ಇದ್ದರೆ ನಮಗೆ ಲಾಭ ಎಂದು ಕುರಿಗಾಹಿಗಳು ಕಣ್ಣೀರು ಹಾಕುವ ಸ್ಥಿತಿ ಎದುರಾಗಿದೆ.

ಆತಂಕದಲ್ಲಿ ಗ್ರಾಮಸ್ಥರು...

ಒಂದೆಡೆ ಕಳೆದ ಒಂದು ವಾರದಿಂದ ಕುರಿಗಾಹಿಗಳು ಕಣ್ಣಿಗೆ ನಿದ್ದೆ ಇಲ್ಲದಂತೆ ರಾತ್ರಿಯಿಡಿ ಕುರಿಗಳನ್ನು ಕಾಯುತ್ತಿದ್ದಾರೆ. ಮತ್ತೊಂದೆಡೆ ರಾತ್ರಿ ಸಮಯದಲ್ಲಿ ಮೇಡ್ಲೇರಿ ಗ್ರಾಮದ ರಸ್ತೆಗಳಲ್ಲಿ ಗ್ರಾಮಸ್ಥರು ಓಡಾಡಲು ಭಯ ಪಡುತ್ತಿದ್ದಾರೆ. ಆದ್ದರಿಂದ ಅರಣ್ಯ ಇಲಾಖೆಯವರು ಕೂಡಲೇ ಸೂಕ್ತ ಕ್ರಮ ಕೈಗೊಂಡು ಚಿರತೆ ಸೆರೆ ಹಿಡಿಯಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಬಲೆಗೆ ಬೀಳದ ಚಿರತೆ...

ಕುರಿಗಳನ್ನು ಚಿರತೆ ತಿಂದು ಹಾಕಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ಹಿಡಿಯಲು ಎರಡು ದಿನದಿಂದ ಬಲೆ ಕೂಡ ಇಟ್ಟಿದ್ದಾರೆ. ಚಿರತೆ ಮಾತ್ರ ಬಲೆಯ ಹತ್ತಿರ ಸುಳಿಯದಿರುವುದು ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಉಂಟು ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net