

ವಿಜಯಪುರ: ‘ನಿಂಬೆನಾಡು’ ಎಂದೇ ಖ್ಯಾತಿ ಪಡೆದ ವಿಜಯಪುರ ಜಿಲ್ಲೆ ಕರೊನಾಗೆ ತತ್ತರಿಸಿದೆ. ನಿಂಬೆ ಧಾರಣೆ ತೀವ್ರ ಕುಸಿದಿದ್ದು, ರೈತರು ಸಂಕಷ್ಟ ಎದುರಿಸುವಂತಾಗಿದೆ.
ನಿಂಬೆ ಬೆಳೆಗೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿರುವ ವಿಜಯಪುರ ಜಿಲ್ಲೆಯಿಂದ ಹೊರ ರಾಜ್ಯಗಳಿಗೂ ನಿಂಬೆ ರಫ್ತು ಆಗುತ್ತದೆ. ಪ್ರತಿ ಬೇಸಿಗೆಯಲ್ಲಿ ನಿಂಬೆಗೆ ಹೆಚ್ಚು ಬೇಡಿಕೆ ಇರುತ್ತದೆ. ಆದರೆ ಈ ಬಾರಿ ಕರೊನಾದಿಂದಾಗಿ ದರ ಕುಸಿದಿದ್ದು, ಬೆಳೆಗಾರರು ಆತಂಕದಲ್ಲಿದ್ದಾರೆ. ನಾಲ್ಕು ತಿಂಗಳ ಹಿಂದಷ್ಟೇ ಧಾರಣೆ ಸುಧಾರಿಸಿದ್ದು, ಕಳೆದ ಮಾರ್ಚ್ನಲ್ಲಿ ಪ್ರತಿ 1000 (ಒಂದು ಡಾಗ್) ನಿಂಬೆಗೆ 400ರಿಂದ 1100 ರೂ. ವರೆಗೆ ಇದ್ದ ಧಾರಣೆ ಏಪ್ರಿಲ್ನಲ್ಲಿ ತೀವ್ರ ಕುಸಿತ ಕಂಡಿದೆ. ಪ್ರಸ್ತುತ 1 ಸಾವಿರಕ್ಕೆ 150ರಿಂದ 200 ರೂ. ದರ ಸಿಗುತ್ತಿದೆ. ಗರಿಷ್ಠ ಎಂದರೆ 500 ರೂ. ಸಿಗುತ್ತಿದೆ. ಹಾಗಾಗಿ ರೈತರ ರಸ್ತೆ ಮೇಲೆ ನಿಂಬೆ ಸುರಿದು ಆಕ್ರೋಶ ಹೊರಹಾಕುತ್ತಿದ್ದಾರೆ.
ರಾಜ್ಯದಲ್ಲಿ ಹೆಚ್ಚು ಲಿಂಬೆ ಉತ್ಪಾದನೆ: ರಾಜ್ಯದಲ್ಲಿ 12,700 ಹೆಕ್ಟೇರ್ ಪ್ರದೇಶದಲ್ಲಿ ಲಿಂಬೆ ಬೆಳೆಯಲಾಗುತ್ತಿದ್ದು, ವಿಜಯಪುರ ಜಿಲ್ಲೆಯಲ್ಲೇ 7,342 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಸರಿಸುಮಾರು ಪ್ರತಿ ಹೆಕ್ಟೇರ್ಗೆ 25 ಟನ್ನಷ್ಟು ವಾರ್ಷಿಕ ಲಿಂಬೆ ಬೆಳೆ ಉತ್ಪಾದನೆ ಮಾಡಲಾಗುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು 1.83 ಲಕ್ಷ ಟನ್ನಷ್ಟು ಲಿಂಬೆ ಬೆಳೆಯಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.
ರಫ್ತಿಗೂ ಬೇಡಿಕೆ ಇದ್ದು, ಪ್ರತಿ ವರ್ಷ 350ರಿಂದ 500 ಕೋಟಿ ರೂ.ವರೆಗೆ ವಹಿವಾಟು ನಡೆಯುತ್ತಿದ್ದು, ಇದೀಗ ದರ ಕುಸಿತದಿಂದ ವಹಿವಾಟಿನಲ್ಲಿ ಭಾರಿ ಇಳಿದಿದೆ ಎನ್ನುತ್ತಾರೆ ರೈತ ಶಿವಾನಂದ ಮಾಶ್ಯಾಳ.
| ಹೀರಾನಾಯ್ಕ ಟಿ.