ವಿಧಾನ ಪರಿಷತ್ ಚುನಾವಣೆ: ಮತದಾನದ ವೆಬ್‌ಕಾಸ್ಟಿಂಗ್‌ಗೆ ಬಿಜೆಪಿ ಮನವಿ

Webcasting demand
Published on

ಬೆಂಗಳೂರು: ವಿಧಾನ ಪರಿಷತ್ ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆ ಜೂ.3ರಂದು ನಡೆಯಲಿದೆ. ಕನಕಪುರ, ಹೊಸಕೋಟೆ, ಆನೇಕಲ್, ದೇವನಹಳ್ಳಿ, ಬಿಟಿಎಂ ಲೇಔಟ್ ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾನದ ನೇರ ವೆಬ್‌ಕಾಸ್ಟಿಂಗ್ ವ್ಯವಸ್ಥೆಗೆ ಬಿಜೆಪಿ ಮೊರೆಯಿಟ್ಟಿದೆ.

ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಪಕ್ಷದ ಕಾನೂನು ಪ್ರಕೋಷ್ಠದ ನಿಯೋಗ ಮಂಗಳವಾರ ಮನವಿಪತ್ರ ಸಲ್ಲಿಸಿ, ಪ್ರಸ್ತಾಪಿಸಿದ ವಿಧಾನಸಭೆ ಕ್ಷೇತ್ರಗಳು ಅತಿಸೂಕ್ಷ್ಮ ಮತಗಳನ್ನು ಒಳಗೊಂಡಿವೆ. ಮತದಾನ ಸುಗಮ ಹಾಗೂ ಶಾಂತಿಯುತವಾಗಿ ನಡೆಯುವ ದೃಷ್ಟಿಯಿಂದ ಮತದಾನದ ದಿನದಂದು ನೇರ ವೆಬ್‌ಕಾಸ್ಟಿಂಗ್‌ಗೆ ವ್ಯವಸ್ಥೆ ಮಾಡಲು ಕೋರಿದೆ.

ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಮತದಾರರಿಗೆ ಆಮಿಷ, ಪದವೀಧರ ಮತದಾರರಿಗೆ ಅಪಮಾನ ಮಾಡುವ ರೀತಿಯಲ್ಲಿ ಕೊಡುಗೆಗಳು ನೀಡುತ್ತಿರುವ ಬಗ್ಗೆ ಬಿಜೆಪಿ ಆರೋಪಿಸಿ, ಚುನಾವಣಾ ಆಯೋಗಕ್ಕೆ ಈಗಾಗಲೇ ಹಲವು ದೂರುಗಳನ್ನು ಸಲ್ಲಿಸಿದೆ.

ಗ್‌ಟಿ ಬಾಕ್ಸ್‌ಗಳ ಪತ್ತೆ, ಲಕ್ಕಿ ಡ್ರಾ ಕರಪತ್ರ ಹಂಚಿಕೆ ಮುಂತಾದವುಗಳನ್ನು ಪುರಾವೆಯಾಗಿ ನೀಡಿದ್ದು, ಕಾಂಗ್ರೆಸ್ ಶತಾಯಗತಾಯ ಗೆಲ್ಲುವುದಕ್ಕಾಗಿ ಅಧಿಕಾರದ ದುರ್ಬಳಕೆ, ಅಡ್ಡದಾರಿ ಹಿಡಿಯಲಿದೆ ಎನ್ನುವುದು ಬಿಜೆಪಿಯ ಸಂದೇಹವಾಗಿದೆ.

ಈ ಹಿನ್ನೆಲೆಯಲ್ಲಿ ಪಕ್ಷದ ಕಾನೂನು ಪ್ರಕೋಷ್ಠವು ನೇರ ವೆಬ್‌ಕಾಸ್ಟಿಂಗ್‌ಗೆ ಕೋರುವ ಮೂಲಕ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಬಯಸಿದ್ದು, ಮುಖ್ಯ ಚುನಾವಣಾಧಿಕಾರಿ ಕಚೇರಿಯು ಮನವಿ ಸ್ವೀಕರಿಸಿದೆ.

ಮನವಿ ಸಲ್ಲಿಸಿದ ನಿಯೋಗದಲ್ಲಿ ಪಕ್ಷದ ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತಕುಮಾರ್, ಮುಖಂಡ ಗುರುದತ್ತ ಹೆಗ್ಡೆ, ಸದಸ್ಯರಾದ ವೀಣಾ ಅರುಣ್, ಕೆ.ಪಿ.ವಿಶ್ವನಾಥ್, ಬೆಂಗಳೂರು ಉತ್ತರ ಜಿಲ್ಲಾ ಸಂಚಾಲಕ ಶಿವಾನಂದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net