ಯುವಕರು ಜ್ಞಾನದಿಂದ ಬಲಾಢ್ಯರಾಗಬೇಕು; ಸ್ಪೀಕರ್ ಯು.ಟಿ.ಖಾದರ್ ಸಲಹೆ

UTK
Published on

ಬೆಂಗಳೂರು: ದೇಶ ಬಲಿಷ್ಠವಾಗಬೇಕಾದರೆ ರಾಜಕಾರಣಿಗಳು, ಉದ್ಯಮಿಗಳು ಬಲಶಾಲಿಗಳಾದರೆ ಸಾಧ್ಯವಿಲ್ಲ. ಬದಲಾಗಿ ಈ ದೇಶದ ಯುವಕರು ಜ್ಞಾನದಿಂದ ಬಲಾಢ್ಯರಾದರೆ ದೇಶ ಬಲಿಷ್ಠವಾಗುತ್ತದೆ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ಭಾರತೀಯ ವಿದ್ಯಾಭವನದಲ್ಲಿ ಬಿ.ಕ್ಯಾಂಪ್ ಸಂಸ್ಥೆ ಆಯೋಜಿಸಿದ್ದ ಗ್ರಾಜುಯೇಶನ್ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.

ಭಾರತ ವಿಶ್ವದ ನಂ.1 ಸ್ಥಾನಕ್ಕೆ ಬರಬೇಕೆಂಬುದು ಎಲ್ಲರ ಅಪೇಕ್ಷೆ. ಆದರೆ ವಿಧಾನಸಭೆಯಲ್ಲಿ ಕುಳಿತ ರಾಜಕಾರಣಿಗಳು, ಲೋಕಸಭೆಯಲ್ಲಿ ಕುಳಿತ ಸಂಸದರು ಅಥವಾ ಕೆಲವೇ ಕೆಲವು ಉದ್ಯಮಿಗಳಿಂದ ಅದು ಸಾಧ್ಯವಿಲ್ಲ. ಬದಲಾಗಿ ಈ ದೇಶದ ಯುವ ಸಮುದಾಯ ಉತ್ತಮ ಜ್ಞಾನ ಮತ್ತು ತರಬೇತಿಯನ್ನು ಪಡೆದು ಬಲಾಢ್ಯರಾದರೆ ಆಗ ಈ ದೇಶ ಬಲಿಷ್ಠವಾಗುತ್ತದೆ. ಈ ನಿಟ್ಟಿನಲ್ಲಿ ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜೂಂದಾರ್ ಷಾ ಅವರು ಸ್ಥಾಪಿಸಿರುವ ಬಿ.ಪ್ಯಾಕ್ ಸಂಸ್ಥೆ ಶಿಕ್ಷಣ ಮತ್ತು ತರಬೇತಿಯನ್ನು ನೀಡುವ ಮೂಲಕ ಸಮಾಜಕ್ಕೆ ಸತ್ಪ್ರಜೆಗಳನ್ನು ರೂಪಿಸಿಕೊಡುವ ಮಹತ್ವದ ಕಾರ್ಯ ಮಾಡುತ್ತಿದೆ. ಹಾಗೆ ತರಬೇತಿ ಪಡೆದ ವ್ಯಕ್ತಿಗಳು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೇಶ ಕಟ್ಟುವ ಕೆಲಸಕ್ಕೆ ಮುಂದಾಗಬೇಕು ಎಂದು ಯು.ಟಿ.ಖಾದರ್ ಕರೆ ನೀಡಿದರು.

ವಿದೇಶಗಳಿಗೆ ಭಾರತಕ್ಕೂ ಬಹಳಷ್ಟು ವ್ಯತ್ಯಾಸವಿದೆ. ವಿದೇಶಗಳ ಎಲ್ಲವನ್ನು ವ್ಯಾವಹಾರಿಕವಾಗಿ ಹಣದಿಂದ ಅಳೆಯುತ್ತಾರೆ. ಆದರೆ ಭಾರತದಲ್ಲಿ ಮಾನವೀಯತೆಯಿಂದ ನೋಡುವ ಗುಣವಿದೆ. ಅಲ್ಲಿ ಹಣ ಇಲ್ಲದವರು ಜೀವನ ನಡೆಸಲು ಅವಕಾಶವಿಲ್ಲ. ಆದರೆ ಭಾರತದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪ್ರತಿಯೊಬ್ಬರೂ ಧೈರ್ಯದಿಂದ ಬದುಕುತ್ತಿರುವುದಕ್ಕೆ ಈ ದೇಶದ ಸಂವಿಧಾನ ಕಾರಣ. ದೇಶ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಸಂವಿಧಾನದಲ್ಲಿ ಪರಿಹಾರವಿದೆ. ಅಂತಹ ಸಂವಿಧಾನದ ಆಶಯಕ್ಕೆ ಪೂರಕವಾಗಿ ಚುನಾಯಿತ ಸರ್ಕಾರಗಳು ಕೆಲಸ ಮಾಡಿದ್ದೇ ಆದರೆ ದೇಶ ವೇಗವಾಗಿ ಪ್ರಗತಿ ಕಾಣುತ್ತದೆ. ವಿವಿಧ ಧರ್ಮೀಯರಿಗೆ ವಿವಿಧ ಧರ್ಮಗ್ರಂಥಗಳಿವೆ. ಆದರೆ ಮನೆಯಿಂದ ಹೊರ ಬಂದ ಮೇಲೆ ಸರ್ವಧರ್ಮೀಯರ ಧರ್ಮಗ್ರಂಥ ದೇಶದ ಸಂವಿಧಾನ ಎಂದು ಯು.ಟಿ.ಖಾದರ್ ವಿವಿರಿಸಿದರು.

ಸಮಾರಂಭದಲ್ಲಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜೂಂದಾರ್ ಷಾ, ಬಿ.ಕ್ಯಾಂಪ್ ಸಂಸ್ಥೆಯ ನಾಗಲಕ್ಷ್ಮಿ, ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್.ಸುರೇಶ, ಅಶೋಕ ರೇವತಿ, ಪ್ರಸಾದ ಬಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net