

ಶಿವಮೊಗ್ಗ: ನಗರದ ಡಿಎಆರ್ ಸಂಭಾಗಣದಲ್ಲಿ ಜು.22ರಿಂದ 24ರವರೆಗೆ ಜಿಲ್ಲೆಯ ಕರ್ನಾಟಕ ಪೊಲೀಸ್ ಅಧಿಕಾರಿಗಳಿಗೆ ಪರಿವರ್ತನಾ ಸುಧಾರಣೆಗಳು, ಹೊಸದಾಗಿ ಜಾರಿಗೊಳಿಸಲಾದ ಕ್ರಿಮಿನಲ್ ಕಾನೂನುಗಳ ಅವಲೋಕನ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಶಿವಮೊಗ್ಗ ಕ್ಯಾಂಪಸ್ ನಿರ್ದೇಶಕ ಡಾ. ರಮಾನಂದ್ ಗರ್ಗೆ ಹೇಳಿದರು.
ಜಿಲ್ಲಾ ಸತ್ರ ನ್ಯಾಯಾಧೀಶ ಮಂಜುನಾಥ್ ನಾಯಕ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ತರಬೇತಿ ಕಾರ್ಯಾಗಾರ ನಡೆಸಿಕೊಡುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2023ರಿಂದ ರಾಗಿಗುಡ್ಡದಲ್ಲಿ ವಿವಿ ಕಾರ್ಯಾರಂಭಗೊಂಡಿದ್ದು, ಕೇಂದ್ರ ಸರ್ಕಾರ, ಪೊಲೀಸ್ ಹಾಗೂ ರಾಷ್ಟ್ರೀಯ ಭದ್ರತೆ ವಿಷಯ ಕುರಿತು ಕೋರ್ಸ್‌ಗಳನ್ನು ಪ್ರಾರಂಭಿಸಲಾಗಿದೆ. ಒಂದು ವರ್ಷದ ಅಲ್ಪಾವಧಿಯಲ್ಲೇ ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ತೆಲಂಗಾಣದಿಂದ ಅಗಾಧ ಬೆಂಬಲ ದೊರೆತಿದೆ. ಭದ್ರತಾ ನಿರ್ವಹಣೆ ಮತ್ತು ಸ್ನಾತಕೋತ್ತರ ಪದವಿ ಕ್ಷೇತ್ರದಲ್ಲಿ ಮೊದಲ ಬ್ಯಾಚ್ ಆಗಿದ್ದು, ಪೊಲೀಸ್ ವಿಜ್ಞಾನ ಮತ್ತು ನಿರ್ವಹಣೆಯಲ್ಲಿ ಪದವಿ ಡಿಪ್ಲೊಮಾ ಮಾಡಲು ಶಿವಮೊಗ್ಗ ಅನುಕೂಲಕರ ವಾತಾವರಣ ಕಲ್ಪಿಸಿದೆ ಎಂದರು.
ಭದ್ರತಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಗುಣಾತ್ಮಕ ಶಿಕ್ಷಣ ನೀಡುತ್ತಿದ್ದು, ಕೋರ್ಸ್‌ಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಳೆದ ವರ್ಷ 15 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದರು. ಈ ಶೈಕ್ಷಣಿಕ ವರ್ಷದಲ್ಲಿ ಕ್ಲಿನಿಕಲ್ ಸೈಕಾಲಜಿ ಕ್ಷೇತ್ರದಲ್ಲಿ ಸ್ನಾತಕೋತ್ತರ ಮತ್ತು ರಕ್ಷಣಾ ಕಾರ್ಯತಂತ್ರ ಅಧ್ಯಯನಗಳಲ್ಲಿ ಸ್ನಾತಕೋತ್ತರ ಕೋರ್ಸ್ ಪರಿಚಯಿಸುತ್ತಿದ್ದು, ಈ ಬಾರಿ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ. 100ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಪ್ರವೇಶಾತಿ ಮಾಡಲಾಗುವುದು ಎಂದು ತಿಳಿಸಿದರು.
ಕ್ಲಿನಿಕಲ್ ಸೈಕಾಲಜಿ ಸಹ ಪ್ರಾಧ್ಯಾಪಕ ಡಾ. ಎಸ್.ನಂದಕುಮಾರ ಪೂಜಾಂ ಮಾತನಾಡಿ, ರಕ್ಷಾ ವಿವಿ ಗುಜರಾತ್‌ನ ಗಾಂಧಿನಗರದಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ಅರುಣಾಚಲ ಪ್ರದೇಶ, ಕರ್ನಾಟಕ, ಉತ್ತರ ಪ್ರದೇಶ ಮತ್ತು ಪುದುಚೇರಿಯಲ್ಲಿ ಕ್ಯಾಂಪಸ್‌ಗಳನ್ನು ಹೊಂದಿದೆ ಎಂದರು.
ಪೊಲೀಸ್ ಆಡಳಿತದ ಸಹಾಯಕ ಪ್ರಾಧ್ಯಾಪಕಿ ಡಾ. ಕಾವೇರಿ ಟಂಡನ್, ಸಹಾಯಕ ಪ್ರಾಧ್ಯಾಪಕ ಡಾ. ಶಿವಲಿಂಗಪ್ಪ ಅಂಗಡಿ, ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕಿ ಹರ್ಷಿತಾ ಮಿಶ್ರಾ, ಡ್ರಿಲ್ ಬೋಧಕ ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿದ್ದರು.