

ಸಾಗರ: ಮಲೆನಾಡಿನಲ್ಲಿ ಅಡಕೆ ಬೆಳೆಗಾರರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಕುರಿತು ಸೋಮವಾರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಪದಾಧಿಕಾರಿಗಳು ಸಾಗರ ಉಪವಿಭಾಗಾಧಿಕಾರಿ ವೀರೇಶ್‌ಕುಮಾರ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಪ್ರಸ್ತುತ ಅಡಕೆ ಬೆಳೆಗಾರರು ಎದುರಿಸುತ್ತಿರುವ ಕಾನೂನಾತ್ಮಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಿ ಕಾನೂನು ಹೋರಾಟ ರೂಪಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ವನ್ಯಪ್ರಾಣಿಗಳ ಹಾವಳಿಯಿಂದ ಅಡಕೆ ಸಲು ನಷ್ಟವಾಗುತ್ತಿರುವುದು, ಕೊಳೆರೋಗಕ್ಕೆ ಸರ್ಕಾರದಿಂದ ಪರಿಹಾರ ಬಾರದಿರುವ ಕುರಿತು ಬೆಳೆಗಾರರು ಅಸಮಾಧಾನ ವ್ಯಕ್ತಪಡಿಸಿದರು.
ಬೆಳೆ ವಿಮೆ ಹಾಗೂ ಪಹಣಿಗಳಲ್ಲಿ ಕಂಡುಬಂದಿರುವ ಲೋಪಗಳನ್ನು ಸರಿಪಡಿಸಬೇಕು. ಹಾಳಾಗಿರುವ ಮಳೆಮಾಪಕಗಳ ಬದಲಾವಣೆ, ವನ್ಯಜೀವಿಗಳಿಂದ ಬೆಳೆಹಾನಿಯಾದರೆ ಬೆಳೆಗಾರರಿಗೆ ಪರಿಹಾರ, ಕೊಳೆರೋಗದಿಂದಾದ ನಷ್ಟಕ್ಕೆ ಪರಿಹಾರ, ಬೆಳೆಗಾರ ಸಂಘದ ಪ್ರಮುಖರ ನೇತೃತ್ವದಲ್ಲಿ ಸಂಬಂಧಿತ ಇಲಾಖೆಗಳ ಸಭೆ ಕರೆಯಬೇಕು ಎಂದು ಒತ್ತಾಯಿಸಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್, ಕಾರ್ಯದರ್ಶಿ ರಾಜೇಂದ್ರ ಖಂಡಿಕಾ, ಪ್ರಮುಖರಾದ ರಂಗನಾಥ್ ಪಡವಗೋಡು, ಕೆ.ಎಸ್.ಗೌತಮ್, ಕೆ.ವಿ.ಪ್ರವೀಣ್, ಸುದರ್ಶನ್, ಮಂಜು ದೊಂಬೆ, ಆರ್.ಎಸ್.ಗಿರಿ, ಈಳಿ ಶ್ರೀಧರ್, ಜನಾರ್ದನ ಹಕ್ರೆ, ವೆಂಕಟಾಚಲ ಇತರರಿದ್ದರು.