ಭಾರತೀಯ ಕಾನೂನುಗಳಿಗೆ ಗೌರವಿಸಿ

IMG20231014110010
Published on

ಬೈಲಕುಪ್ಪೆ : ಸ್ಥಳೀಯವಾಗಿ ನೆಲೆಗೊಂಡಿರುವ ಟಿಬೆಟಿಯನ್ನರೂ ಭಾರತದ ಕಾನೂನುಗಳಿಗೆ ಗೌರವಿಸಬೇಕು ಎಂದು ಪಿರಿಯಾಪಟ್ಟಣದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಶಮಿವುಲ್ಲಾ ಹೇಳಿದರು.
ಬೈಲಕುಪ್ಪೆ ಒಂದನೇ ಕ್ಯಾಂಪಿನ ಟಿಬೆಟಿಯನ್ ಲಗ್ಸಾಮ್ ಸಭಾಂಗಣದಲ್ಲಿ ಇಂಡೋ ಟಿಬೇಟಿಯನ್ ಫ್ರೆಂಡ್ ಶಿಪ್ ಸೊಸೈಟಿ ಮತ್ತು ತಾಲೂಕು ಕಾನೂನು ನೆರವು ಸಮಿತಿಯಿಂದ ವಿವಿಧ ಸಂಘ ಸಂಸ್ಥೆ ಸದಸ್ಯರಿಗೆ ಶನಿವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಟಿಬೆಟ್ ಮೂಲದವರಿಗೆ ಸ್ಥಳೀಯ ಕಾನೂನುಗಳ ಕನಿಷ್ಠ ಅರಿವು ಇರಬೇಕು. ಇಲ್ಲದಿದ್ದರೆ ಮಾನಸಿಕವಾಗಿ ನೋವು ಅನುಭವಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು. ಸೊಸೈಟಿ ಅಧ್ಯಕ್ಷ ಮತ್ತು ವಕೀಲ ಜವರೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಲ್ಲಿ ವಾಸವಿರುವ ಟಿಬೆಟಿಯನ್ನರು ಕಾನೂನುಗಳ ಅರಿವಿಲ್ಲದೆ ತಪ್ಪು ಮಾಡುತ್ತಿದ್ದಾರೆ. ಅದನ್ನು ತಪ್ಪಿಸಲು ಕಾನೂನು ಅರಿವು ಶಿಬಿರ ಅತ್ಯವಶ್ಯಕ ಎಂದರು.
ಬೈಲಕುಪ್ಪೆ ಪೊಲೀಸ್ ಠಾಣಾಧಿಕಾರಿ ಅಜಯ್ ಕುಮಾರ್ ಮಾತನಾಡಿ, ಟಿಬೆಟಿಯನ್ನರಿಗೆ ಯಾವುದೇ ಸಂದರ್ಭದಲ್ಲಿ ತೊಂದರೆಯಾದರೂ ಪೊಲೀಸರ ನೆರವು ದೊರೆಯುತ್ತದೆ ಎಂದರು. ವಕೀಲರಾದ ಹರೀಶ, ಶ್ರೀನಿವಾಸ ಮಾತನಾಡಿದರು. ಟಿಬೆಟಿಯನ್ ಆಡಳಿತ ಅಧಿಕಾರಿ ಗಳಾದ ಚಿಮೆ ದೊರ್ಜಿ, ನಿಮಾ, ಸೊಸೈಟಿ ಸದಸ್ಯರಾದ ಜೆ. ಪಿ. ಅರಸ್, ಗುರು ರಾಜೇಂದ್ರ, ನಟರಾಜ್, ಮಹಿಳಾ ಸಂಘದ ಸದಸ್ಯರು, ಬೌದ್ಧ ಸನ್ಯಾಸಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net