

ಚಿಕ್ಕಮಗಳೂರು: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ಹಲವಾರು ವಿದ್ಯಾರ್ಥಿಗಳು ಇಂದು ದೇಶದ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಹಾಗಾಗಿ ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಲು ಮುಂದಾಗಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಶನಿವಾರ ನಗರದ ಉಪ್ಪಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹಲವಾರು ಸೌಲಭ್ಯ ಒದಗಿಸಿ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿದೆ. ಶಾಲೆ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಒಗ್ಗಟ್ಟಾಗಿ ಮಕ್ಕಳನ್ನು ಕರೆತರುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಹುಟ್ಟು-ಸಾವಿನ ನಡುವೆ ಇರುವಷ್ಟು ದಿವಸ ಸಮಾಜಕ್ಕೆ ಮಾದರಿಯಾಗಿ ಜೀವಿಸಬೇಕು. ಸರ್ಕಾರಿ ಶಾಲೆಗಳ ಸಣ್ಣಪುಟ್ಟ ಕೊರತೆ ನೀಗಿಸಲು ದಾನಿಗಳು ಹಾಗೂ ಹಳೇ ವಿದ್ಯಾರ್ಥಿಗಳು ಕೈಜೋಡಿಸಬೇಕು. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅನುಕೂಲವಾಗಲಿದೆ. ಸರ್ವಜನಾಂಗದ ಶಾಂತಿ ತೋಟ ಎಂಬ ಸಂದೇಶ ಉಪ್ಪಳ್ಳಿ ಭಾಗಕ್ಕೆ ಬಹಳಷ್ಟು ಹೊಂದಿಕೊಳ್ಳಲಿದೆ. ಬಹುತೇಕ ಮಂದಿ ಮಧ್ಯಮ ವರ್ಗದವರೇ ಹೆಚ್ಚಿರುವ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಿಗೇ ದಾಖಲಿಸಬೇಕು ಎಂದರು.
ನಗರಸಭಾ ಸದಸ್ಯ ಮುನೀರ್ ಮಾತನಾಡಿ, ನಾನೂ ಸೇರಿ ಹಲವಾರು ಮಂದಿ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದೇವೆ. ಅಂದಿನಿಂದ ಇಂದಿನವರೆಗೂ ನೂತನ ಕಟ್ಟಡ ನಿರ್ಮಾಣವಾಗಿರಲಿಲ್ಲ. ಹಳೆಯ ಕಟ್ಟಡ ಶಿಥಿಲೀಕರಣವಾದ ಹಿನ್ನೆಲೆಯಲ್ಲಿ ನೂತನ ಕೊಠಡಿ ನಿರ್ಮಿಸಿ ಸರ್ಕಾರ ಮಕ್ಕಳಿಗೆ ಅನುಕೂಲ ಕಲ್ಪಿಸಿರುವುದು ಖುಷಿಯ ಸಂಗತಿ ಎಂದರು.
ಉಪ್ಪಳ್ಳಿ ಶಾಲೆಯಲ್ಲಿ ಕೊಠಡಿಗಳ ಕೊರತೆಯಿಂದ ಮಕ್ಕಳನ್ನು ಶಾಲೆಗೆ ದಾಖಲಿಸಲು ಪಾಲಕರು ಹಿಂದೇಟು ಹಾಕುತ್ತಿದ್ದರು. ಇದೀಗ ನೂತನ ಕೊಠಡಿ ನಿರ್ಮಾಣವಾಗಿದೆ. ಜತೆಗೆ ಹೊಸದಾಗಿ ಇನ್ನೂ ಆರು ಕೊಠಡಿಗಳ ನಿರ್ಮಾಣ ಹಾಗೂ ಬೋರ್‌ವೆಲ್ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಶಾಸಕರಿಗೆ ಮನವಿ ಮಾಡಿದ್ದು, ಶಾಸಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ, ಶಾಲೆಗೆ ಶೌಚಗೃಹ ಅಗತ್ಯವಿದ್ದು, 12.35 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದು ತಿಳಿಸಿದರು.
ಶಾಲೆಯ ಹಳೆಯ ವಿದ್ಯಾರ್ಥಿ ಅನ್ಸರ್ ಆಲಿ ಮಾತನಾಡಿ, ಉಪ್ಪಳ್ಳಿ ಶಾಲೆಗೆ ಕಾಫಿ ಬೆಳೆಗಾರರು, ಸ್ಥಳೀಯ ಮುಖಂಡರು, ಹಲವಾರು ದಾನಿಗಳು ಕಂಪ್ಯೂಟರ್, ವಾಟರ್ ಫಿಲ್ಟರ್ ಸೇರಿ ಆರ್ಥಿಕ ನೆರವು ನೀಡಿರುವುದನ್ನು ಎಂದಿಗೂ ಮರೆಯಲಾಗದು ಎಂದರು.
ಕರೊನಾ ವಾರಿಯರ್ಸ್, ಶಾಲೆಗೆ ಸಹಕಾರ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು. ಬಳಿಕ ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಕರಿಗೆ ಏರ್ಪಡಿಸಿದ್ದ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ನಗರಸಭಾ ಸದಸ್ಯ ಖಲಂದರ್, ಎಸ್‌ಡಿಎಂಸಿ ಸದಸ್ಯ ಅಸೀಫ್, ಕಾಫಿ ಬೆಳೆಗಾರ ರಮೇಶ್ ಗೌಡ, ದಾನಿಗಳಾದ ಶಿವೇಗೌಡ, ಯುಸೂಫ್ ಹಾಜಿ, ಮುನೀರ್ ಬಾವ, ಖಲೀಂ ರಜ್ವಿ, ಹಳೇ ವಿದ್ಯಾರ್ಥಿಗಳಾದ ನಂದೀಶ್, ಸಹೀರ್ ಆಲಿ, ಜಮಾಲ್, ತನ್ವೀರ್, ಹರಿದಾಸ್, ಸುದೀಪ್, ಅನಿಲ್, ಕುಮಾರ್, ಮುಖ್ಯ ಶಿಕ್ಷಕ ಸೋಮಶೇಖರ್ ಇತರರಿದ್ದರು.