ಗುರು ಮುಖೇನದ ಕಲಿಕೆ ಶಾಶ್ವತ: ಭಾಗವತ್

sreenadha
ಶ್ರೀನಾದ ಸಂಗೀತ ವಿದ್ಯಾಲಯದ ಉದ್ಘಾಟಿಸಿ ಕೆ.ಸಿ.ನಟರಾಜ ಭಾಗವತ್ ಮಾತನಾಡಿದರು. ರಾಮಚಂದ್ರ ದೇವರು, ಜಿ.ಅರುಣ್‌ಕುಮಾರ್, ಸರಸ್ವತಿ ಅಡಿಗ ಇದ್ದರು.
Published on

ಶಿವಮೊಗ್ಗ: ಕಲೆ ಮತ್ತು ಸಾಹಿತ್ಯ ನಮ್ಮ ಸಮಾಜದ ಅವಿಭಾಜ್ಯ ಅಂಗವಾಗಿವೆ. ಅನಾಧಿಕಾಲದಿಂದ ಒಂದು ಸೂಕ್ತ ವ್ಯವಸ್ಥೆಯಲ್ಲಿ ಗುರು ಮುಖೇನ ಕಲಿಯುವುದು ಈ ದೇಶದ ಪರಂಪರೆ ಎಂದು ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಕೆ.ಸಿ.ನಟರಾಜ್ ಭಾಗವತ್ ಹೇಳಿದರು.

ಕಲ್ಲಹಳ್ಳಿ ಅಭೀಷ್ಟವರದ ಗಣಪತಿ ದೇವಸ್ಥಾನದ ಅವರಣದಲ್ಲಿ ಶ್ರೀನಾದ ಸಂಗೀತ ವಿದ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ಕಲೆ, ಸಾಹಿತ್ಯಕ್ಕೆ ಜಾತಿ ಮತದ ಭೇದವಿಲ್ಲ. ಇದರಲ್ಲಿ ಸಾಧನೆ ಮಾಡುವುದು ಮುಖ್ಯ. ರಿಯಾಲಿಟಿ ಶೋಗಳಲ್ಲಿ ಪ್ರಶಸ್ತಿ ಪಡೆದವರು ಸ್ವಲ್ಪ ದಿನಗಳಲ್ಲೇ ಜನರ ನೆನಪಿನಿಂದ ಮರೆಯಾಗುತ್ತಾರೆ. ಕಷ್ಟಪಟ್ಟು, ಗುರುಮುಖೇನ ವಿದ್ಯೆ ಕಲಿತವರು ದೀರ್ಘ ಕಾಲ ನೆನಪಿನಲ್ಲಿರುತ್ತಾರೆ ಎಂದರು.
ಸಂಗೀತ ಪಿತಾಮಹರಾದ ಕನಕ, ಪುರಂದರ ದಾಸರು ಬ್ರಾಹ್ಮಣರಲ್ಲ. ಸಂಗೀತ ಯಾವುದೇ ಜಾತಿಯ ಸ್ವತ್ತಲ್ಲ. ಇಲ್ಲಿ ಸಾಧನೆ ಬಹಳ ಮುಖ್ಯ. ಸಂಗೀತವೆಂದರೆ ದೊಡ್ಡ ತಪಸ್ಸು. ಆತ್ಮ ಸಂತೃಪ್ತಿಗಾಗಿ ನಮ್ಮನ್ನು ಸಂಗೀತದಲ್ಲಿ ತೊಡಗಿಸಿಕೊಳ್ಳಬೇಕು. ದೇವರು ಪ್ರಕೃತಿಯಲ್ಲಿಯೇ ಸಪ್ತಸ್ವರಗಳನ್ನು ಇರಿಸಿದ್ದಾನೆ ಎಂದು ತಿಳಿಸಿದರು.
ಸಂಗೀತ ವಿದ್ವಾನ್ ಜಿ.ಅರುಣ್ ಕುಮಾರ್ ಮಾತನಾಡಿ, ಶಾಸ್ತ್ರೀಯ ಸಂಗೀತ ಕಲಿಯಲು ಶ್ರದ್ಧಾ ಭಕ್ತಿ ಬೇಕು. ಗುರು ಮುಖೇನ ಕಲಿಯಬೇಕು. ಶರೀರದ ಒಳಚಕ್ರಗಳನ್ನು ಸರಿಪಡಿಸುವ ಮತ್ತು ಉದ್ದೀಪನಗೊಳಿಸುವ ಶಕ್ತಿ ಸಂಗೀತಕ್ಕಿದೆ. ಸಂಗೀತ ಕಲಿಕೆಯನ್ನು ಪ್ರದರ್ಶನಕ್ಕೆ ಸೀಮಿತ ಮಾಡದೇ ಸಾಧನೆಗೂ ಉಪಯೋಗಿಸಿಕೊಳ್ಳಬೇಕು ಎಂದರು
ನಿವೃತ್ತ ಪ್ರಾಚಾರ್ಯ ರಾಮಚಂದ್ರ ದೇವರು ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಶ್ರೀನಾದ ಸಂಗೀತ ವಿದ್ಯಾಲಯದ ಮುಖ್ಯಸ್ಥೆ ಸರಸ್ವತಿ ಅಡಿಗ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net