

ಶಿವಮೊಗ್ಗ: ಸಂಸ್ಕೃತ ಭಾರತಿ ಮತ್ತು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯಿಂದ ನೂರು ದಿನಗಳಲ್ಲಿ ಸರಳವಾಗಿ ಸಂಸ್ಕೃತದಲ್ಲಿ ಮಾತನಾಡುವುದನ್ನು ಕಲಿಸುವ ನೂತನ ಯೋಜನೆಯನ್ನು ಪರಿಚಯಿಸಲಾಗುತ್ತಿದೆ ಎಂದು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಅಧ್ಯಕ್ಷ ಟಿ.ವಿ.ನರಸಿಂಹಮೂರ್ತಿ ಹೇಳಿದರು.
ಈಗಾಗಲೇ ಶಾಲಾ ಕಾಲೇಜುಗಳಲ್ಲಿ ಸಂಸ್ಕೃತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮತ್ತು ಅವರ ಪಾಲಕರಿಗೆ ಈ ಯೋಜನೆ ಉತ್ತಮವಾಗಿದೆ. ಪಠಾಮಿ ಸಂಸ್ಕೃತಮ್ ಹೆಸರಲ್ಲಿ ವಾರದಲ್ಲಿ ಎರಡು ದಿನ ಆನ್‌ಲೈನ್ ಮೂಲಕ ಶಿಕ್ಷಣ ನೀಡಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಸ್ಕೃತ ಸಂಭಾಷಣೆಯ ಕಿರುಪುಸ್ತಕ ವಿತರಿಸಲಾಗುವುದು. ಕಲಿಕಾ ಶಿಬಿರವು ಪ್ರತಿ ಜನವರಿ, ಏಪ್ರಿಲ್, ಜುಲೈ ಮತ್ತು ಅಕ್ಟೋಬರ್‌ನಲ್ಲಿ ಆರಂಭಿಸಲಾಗುವುದು. ಕಳೆದ 42 ವರ್ಷಗಳಿಂದ ಸಂಸ್ಕೃತ ಭಾರತಿ ದೇಶ-ವಿದೇಶಗಳಲ್ಲಿ ಸಂಸ್ಕೃತ ಕಲಿಕಾ ಪ್ರಚಾರ ಕಾರ್ಯ ಮಾಡುತ್ತಿದ್ದು, ಸರಳ ವಿಧಾನದಲ್ಲಿ ಸಂಸ್ಕೃತ ಕಲಿಸಲಾಗುವುದು. ಈಗಾಗಲೇ ಹಲವರು ಪಾಲ್ಗೊಂಡು ಗೀತೆ, ರಾಮಾಯಣ ಇತ್ಯಾದಿ ಗ್ರಂಥಗಳನ್ನು ಅಧ್ಯಯನ ಮಾಡುತ್ತಿದ್ದಾರೆ ಎಂದರು.
ಆಸಕ್ತರು ಹೆಚ್ಚಿನ ಮಾಹಿತಿಗೆ ಗೌತಮ್(7353778239) ಸಂಪರ್ಕಿಸಬಹುದು ಅಥವಾ ಬಿ.ಬಿ.ಸ್ಟ್ರೀಟ್‌ನ ಸಂಸ್ಕೃತ ಭವನದಲ್ಲಿ ಖುದ್ದಾಗಿ ನೋಂದಾಯಿಸಬಹುದು ಎಂದು ಹೇಳಿದರು. ಸಂಸ್ಕೃತ ಭಾರತಿ ಜಿಲ್ಲಾಧ್ಯಕ್ಷ ಎನ್.ವಿ.ಶಂಕರನಾರಾಯಣ, ನಗರ ಅಧ್ಯಕ್ಷ ಎಂ.ಎಸ್.ಗುರುರಾಜ್, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಅ.ನಾ.ವಿಜಯೇಂದ್ರ ರಾವ್, ಕೋಶಾಧ್ಯಕ್ಷ ಸಚ್ಚಿದಾನಂದ ಸುದ್ದಿಗೋಷ್ಠಿಯಲ್ಲಿದ್ದರು.