ಮಾನಸಿಕ ಒತ್ತಡ ನಿರ್ವಹಣಾ ಕೌಶಲ ಕಲಿಕೆ ಇಂದಿನ ಅಗತ್ಯ

sogane centol jail programme
ಸೋಗಾನೆಯ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ. ಆರ್.ಅನಿತಾ ಮಾತನಾಡಿದರು. ರಮಾನಂದ, ಡಾ. ಆನಂದಕುಮಾರ್ ತ್ರಿಪಾಠಿ, ಡಾ. ನಂದಕುಮಾರ್, ಜಿ.ಎಂ.ಮಹೇಶ್, ಸಿದ್ದಪ್ಪ ಟಿ. ಕುರಿ ಇದ್ದರು.
Published on

ಶಿವಮೊಗ್ಗ: ಮಾನಸಿಕ ಒತ್ತಡದಿಂದ ವ್ಯಕ್ತಿಯ ಕಾರ್ಯದಕ್ಷತೆಯಲ್ಲಿ ಸಾಕಷ್ಟು ಲೋಪದೋಷಗಳು ಉಂಟಾಗುತ್ತವೆ. ಆರೋಗ್ಯ ಸಮಸ್ಯೆ ಬಾಧಿಸುತ್ತದೆ. ಒತ್ತಡದ ಗಂಭೀರತೆಯಿಂದ ಮಾನಸಿಕ ಖಿನ್ನತೆಗೆ ಗುರಿಯಾಗಿ ವ್ಯಕ್ತಿಯ ಜೀವಕ್ಕೆ ಆಪತ್ತು ಎದುರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಮಾನಸಿಕ ಒತ್ತಡವನ್ನು ಅಪಾಯದ ಹಂತ ಮೀರಿ ಹೋಗದಂತೆ ತಡೆಯುವ ನಿಟ್ಟಿನಲ್ಲಿ ಮಾನಸಿಕ ಒತ್ತಡ ನಿರ್ವಹಣಾ ತಾಂತ್ರಿಕ ಕೌಶಲಗಳನ್ನು ಶೈಕ್ಷಣಿಕವಾಗಿ ಕಲಿಯುವುದು ಇಂದಿನ ಅಗತ್ಯವಾಗಿದೆ ಎಂದು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ. ಆರ್.ಅನಿತಾ ಹೇಳಿದರು.

ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿ ಶಿವಮೊಗ್ಗದ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಸಹಯೋಗದೊಂದಿಗೆ ಬುಧವಾರ ಮಾನಸಿಕ ಒತ್ತಡ ನಿರ್ವಹಣಾ ತರಬೇತಿ ಮತ್ತು ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ತವ್ಯದ ಸ್ಥಳದಲ್ಲಿ ಅಧಿಕಾರಿ-ಸಿಬ್ಬಂದಿ ಹಲವು ಬಾರಿ ಸಹಜವಾಗಿಯೇ ಒತ್ತಡಕ್ಕೆ ಒಳಗಾಗುತ್ತಾರೆ. ಬಂಧಿವಾಸಿಗಳು ಮಾನಸಿಕ ಒತ್ತಡದಿಂದ ನೆಮ್ಮದಿ ಕಳೆದುಕೊಂಡು ಖಿನ್ನತೆ ಅನುಭವಿಸುವ ಉದಾಹರಣೆಗಳಿವೆ. ಅಂತಹ ಪ್ರಕರಣಗಳನ್ನು ಸೂಕ್ತ ವಿಧಾನಗಳಿಂದ ಗುರುತಿಸಿ ಅವಶ್ಯಕ ಚಿಕಿತ್ಸೆಗಳನ್ನು ನೀಡಿದಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.
ಮಾನಸಿಕ ಸಮತೋಲನವನ್ನು ಕಾಯ್ದುಕೊಂಡಿದ್ದಲ್ಲಿ ಮಾನಸಿಕ ಒತ್ತಡದಿಂದ ದೂರವಿರಲು ಹೆಚ್ಚು ಸಹಕಾರಿಯಾಗುತ್ತದೆ. ಮಾನಸಿಕ ಒತ್ತಡ ನಿರ್ವಹಣೆಯನ್ನು ಶೈಕ್ಷಣಿಕವಾಗಿ ಕಲಿತು ಪರಿಣತಿ ಹೊಂದಬಯಸುವವರಿಗೆ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದಲ್ಲಿ ಸೂಕ್ತ ಪದವಿ ಮತ್ತು ಮಾರ್ಗದರ್ಶನವನ್ನು ತಜ್ಞರಿಂದ ಒದಗಿಸುವ ಸೌಕರ್ಯವಿದ್ದು, ಅದರ ಪ್ರಯೋಜನವನ್ನು ಎಲ್ಲರೂ ಪಡೆಯುವಂತಾಗಬೇಕು ಎಂದರು.
ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ನಿರ್ದೇಶಕ ರಮಾನಂದ ಮಾತನಾಡಿ, ಇಂದಿನ ದಿನಗಳಲ್ಲಿ ಮಾನಸಿಕ ಒತ್ತಡ ನಿರ್ವಹಣೆಯನ್ನು ತಾಂತ್ರಿಕತೆಯನ್ನು ಬೋಧನೆ ಮೂಲಕ ಕಲಿಸಲು ಹೆಚ್ಚು ಒತ್ತು ನೀಡಲಾಗುತ್ತಿದೆ. ಸೂಕ್ತ ತರಬೇತಿಯಿಂದ ಒತ್ತಡವನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಯಶಸ್ಸು ಪಡೆಯಲು ಸಾಧ್ಯ ಎಂದರು.
ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ನಿರ್ದೇಶಕ ಡಾ. ಆನಂದಕುಮಾರ್ ತ್ರಿಪಾಠಿ ಮಾತನಾಡಿದರು. ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ನಂದಕುಮಾರ್ ವಿಶೇಷ ಉಪನ್ಯಾಸ ನೀಡಿದರು. ಕೇಂದ್ರ ಕಾರಾಗೃಹದ ಜೈಲರ್ ಜಿ.ಎಂ.ಮಹೇಶ್, ಸಹಾಯಕ ಜೈಲರ್ ಸಿದ್ದಪ್ಪ ಟಿ. ಕುರಿ, ಸಂಸ್ಥೆಯ ಶಿಕ್ಷಕರಾದ ಗೋಪಾಲಕೃಷ್ಣ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net