ಎಲೆಸುರುಳಿ ರೋಗಕ್ಕೆ ತುತ್ತಾದ ಹೊಗೆಸೊಪ್ಪು

ಎಲೆಸುರುಳಿ ರೋಗಕ್ಕೆ ತುತ್ತಾದ ಹೊಗೆಸೊಪ್ಪು
Published on

ಶಿವು ಹುಣಸೂರು
ನಲವತ್ತರಿಂದ ನಲವತ್ತೈದು ದಿನದ ತಂಬಾಕು ಸಸಿಗಳಿಗೆ ಶೇ.50ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಎಲೆಸುರುಳಿ ರೋಗ ತಗುಲಿದ್ದು, ಎಲೆಗಳು ಮುರುಟಿಕೊಂಡಿವೆ. ಇದರಿಂದ ಉತ್ತಮ ದರ ನಿರೀಕ್ಷೆಯಲ್ಲಿದ್ದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಹವಾಮಾನ ವೈಪರೀತ್ಯ ಹಾಗೂ ತಂಬಾಕು ಕೃಷಿಯೊಂದಿಗೆ ಅಲ್ಲಲ್ಲಿ ತರಕಾರಿ ಬೆಳೆಗಳನ್ನು ಬೆಳೆದಿದ್ದು, ಅದರಲ್ಲೂ ಮೆಣಸು ಕೃಷಿ ಮಾಡಿರುವುದು ಭಾರಿ ಪ್ರಮಾಣದ ಎಲೆಸುರುಳಿ ರೋಗಕ್ಕೆ ಕಾರಣವೆಂದು ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರ(ಸಿಟಿಆರ್‌ಐ)ದ ವಿಜ್ಞಾನಿಗಳು ತಿಳಿಸಿದ್ದಾರೆ.
ಒಣಬಿಸಿಲು, ಅನಿರೀಕ್ಷಿತ ಮಳೆ, ಬಿರುಗಾಳಿ: ಜೂನ್ ತಿಂಗಳ ಆರಂಭದಲ್ಲಿ ಸಾಕಷ್ಟು ಮಳೆಯಾಗಿತ್ತು. ನಂತರದ ದಿನಗಳಲ್ಲಿ ಒಣಬಿಸಿಲು ಆವರಿಸಿದ್ದರಿಂದ ತಂಬಾಕು ಗಿಡಗಳಿಗೆ ಎಲೆಸುರುಳಿ ರೋಗ ಬಾಧಿಸಿದೆ. ಜೂನ್ 15ರ ನಂತರ ಇದ್ದಕ್ಕಿದ್ದಂತೆ ಮಳೆ ಮತ್ತು ಮಳೆಯೊಂದಿಗೆ ಬಲವಾದ ಗಾಳಿ ಬೀಸಿದ್ದೇ ರೋಗಬಾಧೆ ಉಲ್ಬಣಗೊಳ್ಳಲು ಕಾರಣವಾಯಿತು ಎನ್ನಲಾಗಿದೆ.

ಶೇ.50ಕ್ಕೂ ಹೆಚ್ಚು ಪ್ರಮಾಣದಲ್ಲಿ ಸೋಂಕು: ಈ ಬಾರಿ ಮಳೆಯೊಂದಿಗೆ ರಭಸವಾಗಿ ಗಾಳಿ ಬೀಸಿದ ಪರಿಣಾಮ ಮೊಟ್ಟೆಗಳು ಮತ್ತು ನೊಣಗಳು ಪ್ರದೇಶದಿಂದ ಪ್ರದೇಶಕ್ಕೆ ಯಥೇಚ್ಛವಾಗಿ ಹರಡಿವೆ. ಇದರಿಂದಾಗಿ ರೋಗಬಾಧೆ ಸೋಂಕಿನ ಪ್ರಮಾಣವೂ ಹೆಚ್ಚು ಕಂಡುಬಂದಿದೆ. ಹುಣಸೂರು. ಪಿರಿಯಾಪಟ್ಟಣ ತಾಲೂಕುಗಳಲ್ಲಿ ಮಧ್ಯಮ ಪ್ರಮಾಣದಲ್ಲಿ ಕಂಡುಬಂದಿದ್ದು, ಇದೀಗ ಈ ಎರಡು ತಾಲೂಕುಗಳಲ್ಲಿ ರೋಗಬಾಧೆಯ ಸೋಂಕು ಹೆಚ್ಚುವ ಸಾಧ್ಯತೆಗಳಿವೆ. ಹುಣಸೂರು ಉಪವಿಭಾಗ ವ್ಯಾಪ್ತಿಯಲ್ಲಿ 50 ಸಾವಿರ ಹೆಕ್ಟೇರ್‌ಗೂ ಅಧಿಕ ಭೂಪ್ರದೇಶದಲ್ಲಿ ತಂಬಾಕು ಬೆಳೆಯಲಾಗಿದ್ದು, ರಾಮನಾಥಪುರ ವ್ಯಾಪ್ತಿಯಲ್ಲಿ 20 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಭೂಪ್ರದೇಶದಲ್ಲಿ ತಂಬಾಕು ಕೃಷಿ ಮಾಡಲಾಗಿದೆ.

ಗರಿಷ್ಠ ದರದ ನಿರೀಕ್ಷೆಯಲ್ಲಿ ರೈತರು: ವಿಶ್ವದಲ್ಲಿ ತಂಬಾಕು ಬೆಳೆವ ಪ್ರಮುಖ ದೇಶದಲ್ಲಿ ಹವಾಮಾನ ವೈಪರೀತ್ಯದಿಂದ ಇಳುವರಿ ಕುಂಠಿತಗೊಂಡಿದ್ದು, ಭಾರತದಲ್ಲಿ ತಂಬಾಕಿಗೆ ಬಂಪರ್ ಬೆಲೆ ದೊರಕುತ್ತಿದೆ. ಪ್ರಸ್ತುತ ಆಂಧ್ರಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಮಾರುಕಟ್ಟೆಯಲ್ಲಿ ರೈತರು ಕೆಜಿಗೆ ಸಾರ್ವಕಾಲಿಕ ದಾಖಲೆಯ 340 ರೂ.ಗಳನ್ನು ಪಡೆಯುತ್ತಿದ್ದು ಇನ್ನೂ ಹೆಚ್ಚಾಗಬಹುದೆಂದು ಮಾರುಕಟ್ಟೆ ತಜ್ಞರು ಅಂದಾಜಿಸುತ್ತಿದ್ದಾರೆ.

ಕಳೆದ ಸಾಲಿನಲ್ಲಿ 63 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಕೃಷಿ ಮಾಡಲಾಗಿತ್ತು. ಈ ಬಾರಿ ಅದು 70 ಸಾವಿರ ಹೆಕ್ಟೇರ್‌ಗೆ ಏರಿದೆ. ಕಳೆದ ಬಾರಿ 88.66 ಮಿಲಿಯನ್ ಕೆಜಿ ಬೆಳೆದಿದ್ದರು. ಈ ಬಾರಿಯೂ 100 ಮಿಲಿಯನ್ ಕೆಜಿ ಪ್ರಮಾಣ ನಿಗದಿಪಡಿಸಲಾಗಿದೆ. 2023-24ನೇ ಸಾಲಿನ ತಂಬಾಕು ಹರಾಜು ವಹಿವಾಟು ಮಾ.16ಕ್ಕೆ ಅಂತ್ಯಗೊಂಡಿದ್ದು, ಈ ಬಾರಿ ಒಂದು ಕೆಜಿ ಹೊಗೆಸೊಪ್ಪಿಗೆ 257.46 ರೂ.ಗಳನ್ನು ರೈತರು ಪಡೆದುಕೊಂಡಿದ್ದಾರೆ. ಇದು ಕಳೆದೊಂದು ದಶಕದ ದಾಖಲೆಯ ಬೆಲೆಯಾಗಿದೆ.


ಪರಿಹಾರೋಪಾಯಗಳೇನು?: ಶೇ.50ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ತಗುಲಿರುವುದರಿಂದ ರೈತರು ಕೂಡಲೇ ಹಲವು ಔಷಧೋಪಚಾರಗಳನ್ನು ಅನುಸರಿಸುವುದು ಅಗತ್ಯವೆಂದು ಸಿಟಿಆರ್‌ಐ ಮುಖ್ಯಸ್ಥ ಡಾ.ಎಸ್.ರಾಮಕೃಷ್ಣನ್ ತಿಳಿಸಿದ್ದಾರೆ.

ಎಲೆಸುರುಳಿ ರೋಗದ ಸೋಂಕು ತಗುಲಿರುವ ಸಸಿಗಳಿಗೆ ಮೋವೆಂಟ್ ಎನರ್ಜಿ 20 ಎಂಎಲ್ ಕೀಟನಾಶಕವನ್ನು 15 ಲೀಟರ್ ನೀರಿಗೆ ಬೆರೆಸಿ, ಸಂಜೆ ವೇಳೆ ಸಿಂಪಡಣೆ ಮಾಡುವುದು ಉತ್ತಮ. ಬಿಳಿನೊಣಗಳು ಎಲೆಯ ಹಿಂಭಾಗ ಇರುವುದರಿಂದ ರೈತರು ಸಿಂಪಡಣೆ ವೇಳೆ ಎಲೆಯ ಹಿಂಭಾಗಕ್ಕೂ ಕೀಟನಾಶಕವನ್ನು ಸಿಂಪಡಿಸುವುದು ಅಗತ್ಯ. ಜತೆಯಲ್ಲಿ ಪೋಷಕಾಂಶಗಳನ್ನು ಸಿಂಪಡಿಸುವ ಅಗತ್ಯವಿದೆ. 150 ಗ್ರಾಂ ಪೊಟ್ಯಾಷಿಯಂ ನೈಟ್ರೇಟ್ ಅಥವಾ ಕ್ಯಾಲ್ಸಿಯಂ ನೈಟ್ರೇಟ್ ಅನ್ನು 15 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು ಅಥವಾ ಕಾಸ್‌ಬೋ ಪೋಷಕಾಂಶವು ಎಲ್ಲ ವಿಧದ ಪೋಷಕಾಂಶಗಳನ್ನು ಹೊಂದಿದ್ದು(ಕ್ಯಾಲ್ಸಿಯಂ, ಜಿಂಕ್, ಬೋರಾಕ್ಸ್ ಮುಂತಾದವು) ಎಕರೆಗೆ 300ಗ್ರಾಂ ಕಾಜ್‌ಬೋ ಪುಡಿಯನ್ನು 15 ಎಂ.ಎಲ್. ನೀರಿಗೆ ಬೆರೆಸಿ ಸಿಂಪಡಿಸಿದರೆ ಸಸಿಗಳು ಉತ್ತಮವಾಗಿ ಬೆಳೆಯಲಿದೆ ಎಂದು ವಿಜ್ಞಾನಿಗಳು ಸಲಹೆ ನೀಡಿದ್ದಾರೆ. ಈ ನಡುವೆ ಕೆಲವು ಕಡೆ ಹಸಿರುಹುಳು ಬಾಧೆ ಕೂಡ ಕಂಡುಬಂದಿದ್ದು, ಫೇಮ್ ಅಥವಾ ಕೊರಾಜನ್ ಔಷಧವನ್ನು 15ಲೀ ನೀರಿಗೆ 5 ಎಂ.ಎಲ್. ಮಿಶ್ರಣ ಮಾಡಿ ಸಿಂಪಡಿಸಿದಲ್ಲಿ ಹಸಿರುಹುಳು ಬಾಧೆ ನೀಗಲಿದೆ.

ಸೋಂಕು ಹರಡುವುದು ಹೇಗೆ?: ಎಲೆಸುರುಳಿ ರೋಗದ ಸೋಂಕಿಗೆ ಬಿಳಿನೊಣ(ವೈಟ್‌ಫ್ಲೈ) ಎನ್ನುವ ಕೀಟ ಕಾರಣ. ತಂಬಾಕು ಎಲೆಗಳ ಹಿಂಭಾಗ ನೊಣಗಳು ಕುಳಿತು ಎಲೆಗಳ ಸಾರ(ನೀರಿನಂಶ)ವನ್ನು ಎಳೆದು ಇಡೀ ಎಲೆ ಮುರುಟಿಕೊಳ್ಳುವಂತೆ ಮಾಡುತ್ತದೆ. ಈ ನೊಣಗಳು ವೈರಸ್‌ಗಳನ್ನು ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಹೊತ್ತೊಯ್ಯುವ ವಾಹಕಗಳಾಗಿ ಕೆಲಸ ಮಾಡುತ್ತಿವೆ. ಒಂದು ಎಲೆಯಿಂದ ಹೀರಿದ ಸಾರವನ್ನು ಗಂಟಲಿನಲ್ಲಿಟ್ಟುಕೊಂಡು ಮತ್ತೊಂದು ಗಿಡದ ಎಲೆಯ ಮೇಲೆ ಕುಳಿತು ಅಲ್ಲಿನ ಸಾರ ಹೀರುವಾಗ ತನ್ನ ಗಂಟಲಿನಲ್ಲಿದ್ದ ವೈರಸ್‌ನ್ನು ಬಿಡುಗಡೆ ಮಾಡುವ ಮೂಲಕ ರೋಗವಾಹನವಾಗಿ ಕಾರ್ಯನಿರ್ವಹಿಸುತ್ತಿದೆ. ಇದೇ ಸಂದರ್ಭದಲ್ಲಿ ಎಲೆಯ ಹಿಂಬದಿ ನೂರಾರು ಮೊಟ್ಟೆಗಳನ್ನಿಟ್ಟು ವಂಶಾಭಿವೃದ್ಧಿಯನ್ನು ಮಾಡಿಕೊಳ್ಳುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net