

ನವದೆಹಲಿ: ಯುನೈಟೆಡ್ ಕಿಂಗ್ಡಮ್ನ ಪ್ರಖ್ಯಾತ ಪ್ಯಾಧ್ಯಾಪಕಿ ಹಾಗೂ ಭಾರತೀಯ ಮೂಲದ ದೇವಿ ಶ್ರೀಧರ್(35) ಅವರು ಎರಡು ವರ್ಷದ ಹಿಂದೆಯೇ ಕರೊನಾ ವೈರಸ್ ರೀತಿಯ ಸೋಂಕು ಹರಡುತ್ತದೆ ಎಂದು ಭವಿಷ್ಯ ನುಡಿದಿದ್ದರು ಎಂದು ವರದಿಯಾಗಿದೆ.
ಎಡಿನ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಜಾಗತಿಕ ಸಾರ್ವಜನಿಕ ಆರೊಗ್ಯ ವಿಭಾಗದ ಪ್ರಾಧ್ಯಾಪಕಿಯಾಗಿರುವ ದೇವಿ ಶ್ರೀಧರ್, 2018ರಲ್ಲಿ ವೇಲ್ಸ್ನ ಹೇ ಆನ್ ವೈ ಪಟ್ಟಣದಲ್ಲಿ ನಡೆದ ಹೇ ಫೆಸ್ಟಿವಲ್ನಲ್ಲಿ ಕರೊನಾ ವೈರಸ್ ಬಗ್ಗೆ ಭವಿಷ್ಯ ನುಡಿದಿದ್ದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವಿಡಿಯೋದಲ್ಲಿ ಏನಿದೆ?: ಚೀನಾದ ರೈತರು ಪ್ರಾಣಿಗಳಿಂದ ವೈರಸ್ ಸೋಂಕಿಗೆ ಒಳಗಾಗಬಹುದು. ಬಳಿಕ ಸೋಂಕು ಯುನೈಟೆಡ್ ಕಿಂಗ್ಡಮ್ಗೆ ದಾಳಿ ಮಾಡುವ ಮುನ್ನವೇ ಸ್ಥಳೀಯ ಸಮುದಾಯಕ್ಕೂ ಹರಡಬಹುದು ಎಂದು ಹೇಳಿದ್ದರು. ಗಂಭೀರ ಆರೋಗ್ಯ ಸಮಸ್ಯೆಗಳ ಬಗೆಗಿನ ಸರ್ಕಾರದ ತಯಾರಿ ಕುರಿತು ನಡೆದ ಚರ್ಚೆಯಲ್ಲಿ ಸೋಂಕಿನ ಬಗ್ಗೆ ದೇವಿ ಶ್ರೀಧರ್ ಅವರು ಉಲ್ಲೇಖಿಸಿದ್ದರು. ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಸರ್ಕಾರಗಳು ಪ್ರಾಮುಖ್ಯತೆ ನೀಡಬೇಕೆಂದಿದ್ದರು. ಅತಿ ದೊಡ್ಡ ಜನಸಂಖ್ಯೆ ಹೊಂದಿರುವ ರಾಷ್ಟ್ರಗಳಲ್ಲಿ ಸಾಂಕ್ರಾಮಿಕ ರೋಗ ಒಂದು ಪಿಡುಗು ಎಂದು ಎಚ್ಚರಿಸಿದ್ದರು.
ಇದೀಗ ಅವರ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ದೇವಿ ಶ್ರೀಧರ್ ಅವರು ದೂರದೃಷ್ಟಿಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ ವಿಡಿಯೋ ಬಗ್ಗೆ ಸ್ವತಃ ಟ್ವಿಟ್ ಮಾಡಿರುವ ದೇವಿ, ನಾನೇ ಇದನ್ನು ಮರೆತುಬಿಟ್ಟಿದೆ. ನಾನು ಇದನ್ನು 2018ರಲ್ಲಿ ಉದಾಹರಣೆಯಾಗಿ ಹೇಳಿದ್ದೆ. ಆರೋಗ್ಯ ಸಮಸ್ಯೆ ಯಾಕೆ ಒಂದಕ್ಕೊಂದು ಸಂಪರ್ಕಕೊಂಡಿಯಾಗಿವೆ ಎಂಬುದನ್ನು ವಿವರಿಸಲು ಇದನ್ನು ಉದಾಹರಣೆಯಾಗಿ ವಿವರಿಸಿದ್ದೆ ಎಂದು ಬರೆದುಕೊಂಡಿದ್ದಾರೆ.
ಕರೊನಾ ವೈರಸ್ ಇದೀಗ ಎಲ್ಲೆಡೆ ಮೃತ್ಯುಕೂಪವನ್ನು ನಿರ್ಮಿಸಿದ್ದು, ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳದ ಯುಕೆ ಸರ್ಕಾರವನ್ನು ದೇವಿ ಶ್ರೀಧರ್ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಸಾಂಕ್ರಾಮಿಕ ವನ್ನು ತಡೆಗಟ್ಟುವ ಅನೇಕ ಅವಕಾಶಗಳಿಂದ ಸರ್ಕಾರ ತಪ್ಪಿಸಿಕೊಂಡಿದೆ ಎಂದು ಟೀಕಿಸಿದ್ದಾರೆ. (ಏಜೆನ್ಸೀಸ್)