ಜನಪರ ಹೋರಾಟದಿಂದ ನಾಯಕತ್ವ ರೂಪುಗೊಳ್ಳಬೇಕು: ಸಿ.ಟಿ.ರವಿ ಅಭಿಮತ | Dangerous development in Karnataka

C T Ravi MLC
Published on

ಬೆಂಗಳೂರು: ನಾಯಕತ್ವವನ್ನು ಜನರು ಕೊಡಬೇಕು. ಜನಪರ ಕಾರ್ಯ, ಹೋರಾಟದಿಂದಷ್ಟೇ ನಾಯಕತ್ವ ರೂಪುಗೊಳ್ಳಬೇಕು. ಅದುವೇ ನೈಜ ನಾಯಕತ್ವದ ಗುಣಲಕ್ಷಣ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅಭಿಪ್ರಾಯಪಟ್ಟರು.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಕಾಂಗ್ರೆಸ್‌ನ ನಾಯಕತ್ವ ಆ ಪಕ್ಷದ ಆಂತರಿಕ ವಿಚಾರ. ಆದರೆ ಸರ್ಕಾರದ ನಾಯಕತ್ವ ಯಾರು ಕೊಡಬೇಕು, ಹೇಗೆ ರೂಪುಗೊಳ್ಳುತ್ತದೆ ಎಂದು ಮಾತ್ರ ಹೇಳಬಹುದು ಎಂದರು.

ಸಜ್ಜನರು ನಿರ್ಭೀತಿಯಿಂದಲೂ, ದುರ್ಜನರು ಭಯದಿಂದ ಇರುವುದು ಒಳ್ಳೆಯ ಆಡಳಿತದ ಲಕ್ಷಣ. ಈಗ ದುಷ್ಟರು, ಅತ್ಯಾಚಾರಿಗಳು, ಅಪರಾದ ಕೃತ್ಯ ಎಸಗುವವರು, ಭ್ರಷ್ಟರು, ನಿರ್ಭಯರಾಗಿದ್ದು, ಸಜ್ಜನರು, ಅಬಲೆಯರು ಭಯಭೀತರಾಗಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಕುಟುಕಿದರು.

ಅಪಾಯಕಾರಿ ಬೆಳವಣಿಗೆ

ಭ್ರಷ್ಟರು, ದುಷ್ಟರ ರಕ್ಷಣೆ ಮಾಡುವ ವ್ಯವಸ್ಥೆಯಿದೆ ಎನ್ನುವ ಭಾವನೆ ಬಂದಿರುವುದು ಅಪಾಯಕಾರಿಯಾಗಿದ್ದು, ಅಂತಹವರಿಗೆ ರಾಜಕೀಯ ರಕ್ಷಣೆ ಕೊಡುವುದನ್ನು ಯಾರಿದ್ದರೂ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಯೋಗಿ ಆದಿತ್ಯನಾಥ್ ಕ್ರಮಗಳು ಮಾದರಿಯಾಗಿದೆ. ಅರಾಜಕತೆಯಿದ್ದ ರಾಜ್ಯ ಸುವ್ಯವಸ್ಥಿತವಾಗಿದೆ. ಒಳ್ಳೆಯದು ಎಲ್ಲಿದ್ದರೂ ಸ್ವೀಕಾರ ಮಾಡಬೇಕು. ಕರ್ನಾಟಕ ಒಳ್ಳೆಯದನ್ನು ಬಿಟ್ಟು ಬೇರೆಯದನ್ನೆಲ್ಲಾ ಸ್ವೀಕರಿಸಲು ಈ ಸರ್ಕಾರ ಅವಕಾಶ ಮಾಡಿಕೊಡುತ್ತಿದೆ ಎಂದು ಟೀಕಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ ವಿರುದ್ಧ ಕಾಂಗ್ರೆಸ್ ಮಾತನಾಡುತ್ತದೆ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರು ರಾಷ್ಟ್ರೀಯ ಶಿಕ್ಷಣ ನೀತಿ ರಚನಾ ಸಮಿತಿಯ ಮೊದಲ ಅಧ್ಯಕ್ಷರಾಗಿದ್ದರು. ಸುದೀರ್ಘವಾಗಿ ಆಡಳಿತ ನಡೆಸಿದ ಪಕ್ಷ ಪ್ರಾದೇಶಿಕತೆಯ ಉನ್ಮಾದದಲ್ಲಿದೆ. ಯಾವುದನ್ನು ವಿರೋಧಿಸಬೇಕು, ಯಾವುದನ್ನು ಶ್ಲಾಘಿಸಬೇಕು ಎಂಬ ಸಂವೇದನೆಯನ್ನೇ ಕಳೆದುಕೊಂಡಿದೆ ಎಂದು ಸಿ.ಟಿ.ರವಿ ಹರಿಹಾಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net